ನ್ಯೂಸ್

ಗಣೇಶ ಹಬ್ಬ: ಸಾಲು ಸಾಲು ರಜೆ, ಊರಿನತ್ತ ಜನರು, ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್

ಬೆಂಗಳೂರು: ಉದ್ಯೋಗ ಹಾಗೂ ನಾನಾ ಕಾರಣಗಳಿಂದ ನಗರದಲ್ಲಿ ನೆಲೆಸಿರುವರು ಗಣೇಶ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಊರುಗಳಿಗೆ ಹೊರಟಿರುವುದರಿಂದ ನಗರದ ಬಸ್​ ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಉಂಟಾಯಿತು. ಹೊರಜಿಲ್ಲೆ, ಹೊರ ರಾಜ್ಯಗಳನ್ನು ಸಂಪರ್ಕಿಸುವ ನಗರದ ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕುಂಟಾಯಿತು.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂನ ಐಟಿಐ ಗೇಟ್, ಆನಂದ್ ರಾವ್ ಸರ್ಕಲ್​ನಲ್ಲಿ, ಹೆಬ್ಬಾಳ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಇದರಿಂದ ಪ್ರಯಾಣಿಕರು, ಸವಾರರು ಪರದಾಡಿದ್ದಾರೆ.

ರಾತ್ರಿಯಾಗುತ್ತಿದ್ದಂತೆ​ ಕೆಎಸ್ಆರ್​ಟಿಸಿಯತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಮ್ಮ ತಮ್ಮ ಊರುಗಳಿಗೆ ಹೋಗಲು ಸಾವಿರಾರು ಸಂಖ್ಯೆಯಲ್ಲಿ ಜನರು ಲಗೇಜುಗಳೊಂದಿಗೆ ಮೆಜೆಸ್ಟಿಕ್​ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಸ್ಯಾಟ್​ಲೈಟ್ ನಿಲ್ದಾಣ, ಐಟಿಐ ಬಸ್​ ನಿಲ್ದಾಣಗಳು ಕಿಕ್ಕಿರಿದವು.

ಹೂಡಿ ಸರ್ಕಲ್ ಹತ್ತಿರ ಅಯ್ಯಪ್ಪ ನಗರ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಅಯ್ಯಪ್ಪ ನಗರದ ಕಡೆಗೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.