oplus_0 
ನ್ಯೂಸ್

ಡಿಜೆ ಬದಲು ಕಲಾ ತಂಡ ತರಿಸಿ ಮಾದರಿಯಾಗಿ; ಎಸ್ಪಿ ಯಶೋಧಾ ಸಲಹೆ

ರಾಣೆಬೆನ್ನೂರ: ಗಣೇಶೋತ್ಸವಕ್ಕಾಗಿ ಡಿಜೆ ಬುಕ್​ ಮಾಡಿದವರು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದರೆ ಸರ್ಕಾರದ ಆದೇಶದ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಯಾರೂ ಅವಕಾಶ ಮಾಡಿಕೊಡದೆ ಇತರರಿಗೆ ಮಾದರಿಯಾಗುವಂತೆ ವಿವಿಧ ಕಲಾ ತಂಡಗಳನ್ನು ತರಿಸಿ ಗಣೇಶ ವಿಸರ್ಜನೆ ಮಾಡಿದರೆ ಒಳ್ಳೆಯದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.

ಶಹರ ಪೊಲೀಸ್​ ಠಾಣೆ ಹಾಗೂ ಉಪ ವಿಭಾಗದ ವತಿಯಿಂದ ನಗರದ ವರ್ತಕರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಗಣೇಶೋತ್ಸವ ಮತ್ತು ಈದ್​ ಮಿಲಾದ್​ ಹಬ್ಬದ ಶಾಂತಿಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಜೆ ನಿಷೇಧದ ಕುರಿತು ಸರ್ಕಾರದಿಂದ ಆದೇಶ ಹೊರಬರಲಿದೆ. ಅಲ್ಲದೆ ಈಗಾಗಲೇ ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಸೇರಿ ವಿವಿಧೆಡೆ ಈಗಾಗಲೇ ಡಿಜೆ ನಿಷೇಧಿಸಲಾಗಿದೆ. ರಾಣೆಬೆನ್ನೂರ, ಹಾವೇರಿ ಸೇರಿ ಜಿಲ್ಲೆಯಲ್ಲೂ ಗಣೇಶೋತ್ಸವ ಮಂಡಳಿಯವರು ಸ್ವತಃ ಡಿಜೆ ಬಿಟ್ಟು ಸಾಂಸತಿಕ ಕಲಾ ತಂಡಗಳ ಮೂಲಕ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ ಮಾಡಿದರೆ ಮತ್ತೊಬ್ಬರಿಗೆ ಮಾದರಿಯಾಗಲಿದೆ ಎಂದರು.

ಈ ಬಾರಿ ಮಳೆ ಹೆಚ್ಚಾಗಿರುವ ಕಾರಣ ವಿದ್ಯುತ್​ ಅಳವಡಿಕೆ ಬಗ್ಗೆ ಹೆಚ್ಚು ನಿಗಾವಹಿಸಬೇಕು. ವಿದ್ಯುತ್​ ಅನ್ನು ಸರಿಯಾದ ಮಾರ್ಗದಲ್ಲಿ ತೆಗೆದುಕೊಳ್ಳಬೇಕು. ಗಣೇಶ ವಿಸರ್ಜನೆ ಸಮಯದಲ್ಲಿ ನಿಷ್ಕಾಳಜಿ ತೋರಿಸಬೇಡಿ. ಗಣಪತಿ ನೋಡಲು ಬರುವ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಇದರಿಂದ ಮಹಿಳೆಯರು ಸುರಕ್ಷತೆಯಿಂದರಲು ಅನುಕೂಲ ಆಗುತ್ತದೆ. ಜತೆಗೆ ಕುಟುಂಬದೊಂದಿಗೆ ಬಂದು ಗಣೇಶ ನೋಡುತ್ತಾರೆ.

ಈ ಹಿಂದೆ ಈದ್​ ಮೀಲಾದ್​ ಹಬ್ಬಕ್ಕೆ ಡಿಜೆ ಸಹ ಹಚ್ಚುತ್ತಿರಲಿಲ್ಲ. ಇತ್ತೀಚಿನ ದಿನದಲ್ಲಿ ಡ್ರೆಂಡ್​ ಆಗಿ ಇದು ಹೋಗುತ್ತಿದೆ. ಡಿಜೆ ಬಳಸುವವರ ಮನಸ್ಥಿತಿ ಬದಲಾಗಬೇಕು. ಡಿಜೆ ಬದಲು ಸ್ಪೀಕರ್​ ಹಚ್ಚಿಕೊಳ್ಳಬಹುದು. ಅದು ಕೂಡ ಧ್ವನಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಬಳಸಬೇಕು ಎಂದರು.

ಗಣಪತಿ ಮಂಟಪದಲ್ಲಿ ಯಾವುದೇ ಕಾರಣಕ್ಕೂ ಇಸ್ಪೀಟ್​ ಆಡಿಸಬಾರದು. ಇಸ್ಪೀಟ್​ ಆಡಿಸುವುದಕ್ಕಾಗಿ ಗಣಪತಿ ಇಡಬಾರದು. ಅದಕ್ಕಾಗಿ ಗಣಪತಿ ಬಹಳಷ್ಟು ದಿನ ಇಡುವುದರಲ್ಲಿ ಅರ್ಥವಿಲ್ಲ. ಸಂಪ್ರದಾಯದಂತೆ ಪಿತೃಪಕ್ಷಗಿಂತ ಮುಂಚೆ ಗಣಪತಿ ವಿಸರ್ಜನೆ ಆಗಬೇಕು. ಸಾಧ್ಯವಾದಷ್ಟು 21 ದಿನದೊಳಗೆ ಗಣಪತಿ ವಿಸರ್ಜನೆ ಮಾಡಿದರೆ ಒಳ್ಳೆಯದು. ಇದರಲ್ಲಿ ಯಾರೂ ಪ್ರತಿಷ್ಠೆಗೆ ಬೀಳಬಾರದು. ಪ್ರತಿಯೊಂದು ಗಣೇಶೋತ್ಸವ ಮಂಡಳಿಯವರು ಸರ್ಕಾರದ ಮಾರ್ಗಸೂಚಿ ಹಾಗೂ ಸ್ಥಳಿಯ ಅಧಿಕಾರಿಗಳು ತಿಳಿಹೇಳಿದಂತೆ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ$್ಮಣ ಶಿರಕೋಳ, ನಗರಸಭೆ ಉಪಾಧ್ಯಕ್ಷ ಕೆಎಂಪಿ ಮಣಿ, ಡಿವೈಎಸ್ಪಿ ಲೋಕೇಶಪ್ಪ ಜೆ., ಸಿಪಿಐ ಡಾ. ಶಂಕರ, ಸಿದ್ದೇಶ, ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ಹಾಗೂ ವಿವಿಧ ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು, ಮುಸ್ಲಿಂ ಸಮಾಜದವರು ಮತ್ತಿತರರು ಉಪಸ್ಥಿತರಿದ್ದರು.