ಜನಸ್ನೇಹಿ ಆಡಳಿತ, ಗ್ರಾಮಾಭಿವೃದ್ಧಿ, ಸೇವೆಗಳು, ಯೋಜನೆ ಅನುಷ್ಠಾನ,  
ನ್ಯೂಸ್

ಜಾವಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ

ಬಣಕಲ್: ಜನಸ್ನೇಹಿ ಆಡಳಿತ, ಸಮಗ್ರ ಗ್ರಾಮಾಭಿವೃದ್ಧಿ, ನರೇಗಾ ಸಮರ್ಪಕ ಅನುಷ್ಠಾನಕ್ಕಾಗಿ ಬಾಳೂರು ಹೋಬಳಿ ಜಾವಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ.

ಜಾವಳಿ ಗ್ರಾಪಂ ಸರ್ಕಾರದ ಅನುದಾನ ಬಳಸಿ ಗ್ರಾಮಗಳನ್ನು ಅಭಿವೃದ್ಧಿಗೊಳಿಸಿದೆ. ಗ್ರಾಪಂ ಅನೇಕ ಮಾನದಂಡ ಅನುಸರಿಸಿ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟಿತ್ತು. ಅನುದಾನಗಳ ಸಮರ್ಪಕ ಬಳಕೆ, ನರೇಗಾದಿಂದ ಉತ್ತಮ ಕಾಮಗಾರಿಗಳ ಅನುಷ್ಠಾನ, 15ನೇ ಹಣಕಾಸು ಯೋಜನೆಯ ಸದ್ಬಳಕೆ, ಸ್ವಸಹಾಯ ಗುಂಪುಗಳ ಉತ್ತಮ ಕಾರ್ಯ ಚಟುವಟಿಕೆಗಳು, ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆ, ಮೆಸ್ಕಾಂ ಬಿಲ್ ಸಂಪೂರ್ಣ ಪಾವತಿ, ಸಕಾಲ ಸೇವೆಗಳ ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.
ಉತ್ತಮ ಕಚೇರಿ ಕಟ್ಟಡ ಹಾಗೂ ಸಾರ್ವಜನಿಕ ಸೇವೆ ಜತೆಗೆ ಜನರ ಆರೋಗ್ಯ ಸುಧಾರಿಸುವ ಕಾರ್ಯಕ್ರಮಗಳು, ಅಂಗನವಾಡಿ ಹಾಗೂ ಶಾಲೆಗಳ ಅಭಿವೃದ್ಧಿ ಕಾರ್ಯಕ್ರಮಗಳು, ಕಚೇರಿಯಲ್ಲಿ ಕಡತಗಳ ನಿರ್ವಹಣೆ ಜತೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ, ಸಂಪನ್ಮೂಲ ಕ್ರೋಡೀಕರಣ, ಕರ ಸಂಗ್ರಹ, ಮತ್ತಿತರ ಸೌಲಭ್ಯ ಹಾಗೂ ಯೋಜನೆಗಳ ಅನುಷ್ಠಾನಗೊಳಿಸಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ.
ಸುಸಜ್ಜಿತ ಕಚೇರಿ: ಗ್ರಾಮ ಪಂಚಾಯಿತಿ ಸುಸಜ್ಜಿತ ಕಚೇರಿಯನ್ನು ಹೊಂದಿದ್ದು ಗ್ರಾಮಸ್ಥರಿಗೆ ಸಕಲ ಸೇವೆ ನೀಡಲು ಸಜ್ಜಾಗಿದೆ. ವರ್ಗ-1 ಮತ್ತು 15ನೇ ಹಣಕಾಸು ಯೋಜನೆಯಡಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗಿದ್ದು, ಗ್ರಂಥಾಲಯದಲ್ಲಿ ಟಿವಿ, ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರದ ಮೂಲಕ ಅಗತ್ಯ ಸೇವೆಗಳನ್ನು ನೀಡಲಾಗುತ್ತಿದೆ. ಸ್ವಚ್ಛತೆಗೆ, ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಪ್ರಾಮುಖ್ಯತೆ ನೀಡಲಾಗಿದೆ. ಕಸ ಸಂಗ್ರಹಿಸುವ ಸ್ವಚ್ಛವಾಹಿನಿ ವಾಹನದಲ್ಲಿ ಮಹಿಳಾ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಣ ಮತ್ತು ಹಸಿ ಕಸ ವಿಂಗಡಿಸಿ ವಿಲೇ ಮಾಡಲಾಗುತ್ತಿದೆ. ಕಂದಾಯ ವಸೂಲಾತಿಯಲ್ಲಿ ಪ್ರಗತಿ ಕಂಡಿದೆ. ಗಾಂಧಿ ಗ್ರಾಮ ಪುರಸ್ಕಾರದ ಅನುದಾನವನ್ನು ಸೋಲಾರ್ ದೀಪಗಳ ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ ಸೇರಿ ಪ್ರಮುಖ ಕಾರ್ಯಗಳಿಗೆ ಬಳಸಲು ಉದ್ದೇಶಿಸಲಾಗಿದೆ.
ಎಲ್ಲರ ಸಹಕಾರ: ಮಲೆನಾಡಿನಲ್ಲಿ ಗ್ರಾಪಂಗಳು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಸೇವೆ ನೀಡಿದ ಶೇಕಡವಾರು ಲೆಕ್ಕಾಚಾರದ ವಿಷಯದಲ್ಲಿ ಗಣನೀಯ ಅಂಕ ಪಡೆದು ಈ ಬಾರಿ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಕಚೇರಿ ಸಿಬ್ಬಂದಿ, ಅಧಿಕಾರಿ ವರ್ಗ, ಗ್ರಾಪಂ ಸದಸ್ಯರ ಶ್ರಮ, ಗ್ರಾಮಸ್ಥರ ಸರ್ವ ಸಹಕಾರದಿಂದ ಇದು ಸಾಧ್ಯವಾಗಿದೆ ಎನ್ನುತ್ತಾರೆ ಪಿಡಿಒ ಬಿ.ಆರ್.ಯತೀಶ್‌ಕುಮಾರ್.
ಗ್ರಾಪಂ ಅನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ಮತ್ತಷ್ಟು ಉತ್ಸಾಹ ಮತ್ತು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ. ಸರ್ವರ ಸಹಕಾರದೊಂದಿಗೆ ಗ್ರಾಮಾಭಿವೃದ್ಧಿಗೆ ಶ್ರಮಿಸಲಾಗುವುದು ಎನ್ನುತ್ತಾರೆ ಗ್ರಾಪಂ ಅಧ್ಯಕ್ಷ ಎಂ.ಪಿ.ಪ್ರದೀಪ್