Mahatma Gandhi: ವಾರ್ಷಿಕ ಗಾಂಧಿ ಜಯಂತಿಗೆ ಕೆಲವೇ ದಿನಗಳು ಬಾಕಿಯಿರುವಾಗ ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಐಕಾನಿಕ್ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸೋಮವಾರ (ಸೆ. 29) ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸದ ಘಟನೆಯನ್ನು ಭಾರತದ ರಾಯಭಾರಿ ಕಚೇರಿ ಬಲವಾಗಿ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ, ಅಹಿಂಸೆಯ ಪರಂಪರೆ ಮೇಲಿನ ದಾಳಿ ಎಂದು ಕರೆದಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರಿ ಕಚೇರಿ, ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ನಾಚಿಕೆಗೇಡಿನ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಇದು ಕೇವಲ ವಿಧ್ವಂಸಕ ಕೃತ್ಯವಲ್ಲ, ಬದಲಾಗಿ ಅಂತರರಾಷ್ಟ್ರೀಯ ಅಹಿಂಸಾ ದಿನಕ್ಕೆ ಮೂರು ದಿನಗಳ ಮೊದಲು ಅಹಿಂಸೆಯ ಕಲ್ಪನೆಯ ಮೇಲೆ ಮತ್ತು ಮಹಾತ್ಮರ ಪರಂಪರೆಯ ಮೇಲಿನ ಹಿಂಸಾತ್ಮಕ ದಾಳಿಯಾಗಿದೆ.
ನಾವು ಇದನ್ನು ತಕ್ಷಣದ ಕ್ರಮಕ್ಕಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ತ್ವರಿತವಾಗಿ ಚರ್ಚಿಸಿದ್ದೇವೆ. ನಮ್ಮ ತಂಡವು ಈಗಾಗಲೇ ಸ್ಥಳದಲ್ಲಿದ್ದು, ಪ್ರತಿಮೆಯನ್ನು ಅದರ ಮೂಲ ಘನತೆಗೆ ಪುನಃಸ್ಥಾಪಿಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಹೇಳಿದೆ.
ಪ್ರತಿಮೆ ಧ್ವಂಸ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಮೆಟ್ರೋಪಾಲಿಟನ್ ಪೊಲೀಸರು ಮತ್ತು ಸ್ಥಳೀಯ ಕ್ಯಾಮ್ಡೆನ್ ಕೌನ್ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)