ಶಿವಮೊಗ್ಗ: ಇಡೀ ವಿಶ್ವವೇ ಮಹಾತ್ಮ ಗಾಂಧಿ ಅವರ ತತ್ವಾದರ್ಶಗಳನ್ನು ಪಾಲಿಸುತ್ತಿದೆ. ಅವರನ್ನು ರಾಷ್ಟ್ರಪಿತ ಎಂದೇ ಕರೆಯುತ್ತೇವೆ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಅನಾಗರಿಕ ವರ್ತನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಹೊಳೆಹೊನ್ನೂರಿನಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾದಿಂದ ಶನಿವಾರ ಶಿವಮೊಗ್ಗದಿಂದ ಹೊಳೆಹೊನ್ನೂರುವರೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ಯಾತ್ರೆಗೆ ಶಿವಮೊಗ್ಗದ ಗಾಂಧಿ ಪ್ರತಿಮೆ ಎದುರು ಚಾಲನೆ ನೀಡಿ ಮಾತನಾಡಿದರು.
ಗಾಂಧೀಜಿ ಪ್ರತಿಮೆ ಧ್ವಂಸ ಮಾಡಿದವರು ದುಷ್ಟರು. ಸರ್ಕಾರ ಮಹಾತ್ಮರ ಪ್ರತಿಮೆ, ಪುತ್ಥಳಿಗಳಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮುಂತಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಕೃತ್ಯ ಎಸಗಿದವರನ್ನು ತಿದ್ದುವ ಕೆಲಸ ಸಮಾಜದಿಂದಲೂ ನಡೆಯಬೇಕು ಎಂದರು.
ಶಿವಮೊಗ್ಗ ಹಾಗೂ ಗಾಂಧೀಜಿಗೆ ಅವಿನಾಭಾವ ಸಂಬಂಧವಿದೆ. ಸ್ವಾತಂತ್ರೃ ಹೋರಾಟ ಸಂದರ್ಭದಲ್ಲಿ ಗಾಂಧೀಜಿ ಪತ್ನಿ ಸಮೇತರಾಗಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದಾರೆ. ಅನೇಕ ತಾಲೂಕುಗಳಲ್ಲಿ ಸಂಚರಿಸಿದ್ದಾರೆ. ಅವರು ನೆಟ್ಟಿದ್ದ ತೆಂಗಿನ ಮರ ಇಂದಿಗೂ ಶಿವಮೊಗ್ಗದಲ್ಲಿದೆ. ಇಂತಹ ಮಹಾತ್ಮನ ಪ್ರತಿಮೆ ಧ್ವಂಸ ಮಾಡಿರುವುದು ಅಕ್ಷಮ್ಯ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ಪ್ರಮುಖರಾದ ಹೃಷಿಕೇಷ್ ಪೈ, ಕೆ.ವಿ.ಅಣ್ಣಪ್ಪ ಇತರರಿದ್ದರು.