ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಪ್ರಯಾಂಕ್ ಖರ್ಗೆ ಮನುಗನಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಪಿಡಿಗೆ ಪ್ರಶಸ್ತಿ ನೀಡಿದರು.  
ನ್ಯೂಸ್

ಮನುಗನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಮ ಪಂಚಾಯಿತಿ ಮೊದಲನೇ ಬಾರಿಗೆ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನತೆಯಲ್ಲಿ ಸಂತಸ ಮನೆ ಮಾಡಿದೆ.

ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪಂಚಾಯಿತಿ ಅಧ್ಯಕ್ಷೆ ಚಿಕ್ಕಾಲಮ್ಮ, ಉಪಾಧ್ಯಕ್ಷ ಎಲ್‌ಎಂ.ರಮೇಶ್, ಪಿಡಿಒ ಯೋಗೇಂದ್ರ ಅವರಿಗೆ 5 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಿಗೂ ನೀರು, ಬೀದಿ ದೀಪ, ಸ್ವಚ್ಛತೆಯೊಂದಿಗೆ ಮೂಲಸೌಲಭ್ಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಇದಲ್ಲದೆ ನರೇಗಾದಲ್ಲಿಯೂ ಅತ್ಯುನ್ನತ ಪ್ರಗತಿ ಸಾಧಿಸುವ ಮೂಲಕ ಪಂಚಾಯಿತಿ ತಾಲೂಕಿನಲ್ಲೇ ಹೆಸರು ಮಾಡಿತ್ತು. ತಾಲೂಕಿನ ಐದು ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದ್ದು, ಆ ಪೈಕಿ ಮನುಗನಹಳ್ಳಿ ಗ್ರಾಮ ಪಂಚಾಯಿತಿ 354 ಅಂಕ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಗ್ರಾಮ ಪಂಚಾಯಿತಿಯು ಕೋಟೆ, ನಂಜನಗೂಡಿನ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಅಭಿವೃದ್ಧಿಯಲ್ಲಿಯೂ ಸಾಧನೆ ಮಾಡಿದೆ. ಅಧಿಕಾರಿಗಳು, ಪಂಚಾಯಿತಿ ಜನಪ್ರತಿನಿಧಿಗಳ ಸಹಕಾರ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಕೋವಿಡ್ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿತ್ತು. ಜತೆಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನೂ ಕೈಗೆತ್ತಿಕೊಳ್ಳುವ ಮೂಲಕ ಮುಂಚೂಣಿಯಲ್ಲಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮೂಲಸೌಲಭ್ಯದೊಂದಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸದಸ್ಯರು, ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಸೇವೆಗೆ ಮಾಡಲು ಸಾಧ್ಯವಾಗಿದೆ. ಪ್ರಶಸ್ತಿ ಸಾರ್ವಜನಿಕರಿಗೆ ಸಮರ್ಪಣೆ.
ಎಲ್.ಎಂ.ರಮೇಶ್ ಉಪಾಧ್ಯಕ್ಷ, ಮನುಗನಹಳ್ಳಿ ಗ್ರಾಮ ಪಂಚಾಯಿತಿ