ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಗುರುದತ್ತ ಹೆಗಡೆ ಅವರು ಬೀದಿಬದಿ ವ್ಯಾಪಾರಿಗಳಿಗೆ ಕಲ್ಪಿಸಬೇಕಾದ ಮೂಲಭೂತ ಸೌಕರ್ಯ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಅನಿಲ್‌ಕುಮಾರ್ ಭೂಮರಡ್ಡಿ, ಡಾ. ಕವಿತಾ ಯೋಗಪ್ಪನವರ್, ಸಂಜೀವ್‌ಕುಮಾರ್, ಅನುಪಮಾ, ಮಣಿಕಂಠ, ಚನ್ನವೀರಪ್ಪ ಗಾಮನಗಟ್ಟಿ ಇದ್ದರು. 
ನ್ಯೂಸ್

15 ದಿನದಲ್ಲಿ ಗಾಂಧಿಬಜಾರ್ ರಸ್ತೆ ಬದಿ ವ್ಯಾಪಾರಿಗಳ ಸ್ಥಳಾಂತರ

ಶಿವಮೊಗ್ಗ: ನಗರದ ಗಾಂಧಿಬಜಾರ್ ಸೇರಿ ಹಲವು ಜನನಿಬಿಡ ಪ್ರದೇಶ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಿಗಳು ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ಕಾರಣ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಬರುತ್ತಿರುವ ದೂರುಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ಬೀದಿಬದಿ ವ್ಯಾಪಾರಿಗಳಿಗೆ ಕಲ್ಪಿಸಬೇಕಾದ ಮೂಲ ಸೌಕರ್ಯ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಅವರು, ಗಾಂಧಿಬಜಾರ್ ರಸ್ತೆಯ ಇಕ್ಕೆಲಗಳ ವ್ಯಾಪಾರಿಗಳನ್ನು ಮುಂದಿನ 15 ದಿನಗಳಲ್ಲಿ ಈಗಾಗಲೇ ಸೂಚಿಸಲಾದ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗುವುದು ಎಂದರು.

ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿರುವವರನ್ನು ಗುರುತಿಸಿ ಅವರಿಗೆ ತಮ್ಮ ವ್ಯವಹಾರದ ಸ್ಥಳಕ್ಕೆ ಅನುಕೂಲವಾಗುವಂತೆ ಲಭ್ಯವಾಗಬಹುದಾದ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ನೀರು, ಶೌಚಗೃಹ ಮತ್ತು ವಿದ್ಯುತ್ ಸಂಪರ್ಕವನ್ನು 15 ದಿನದೊಳಗೆ ಒದಗಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಹೈಟೆನ್ಶನ್ ವಿದ್ಯುತ್ ತಂತಿ ಹಾದುಹೋಗಿರುವ ಪ್ರದೇಶ ಹಾಗೂ ಪ್ಲೈಓವರ್ ಕೆಳಭಾಗಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸಿಕೊಡಬಹುದಾದ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಿದ ಅವರು, ಬೀದಿಬದಿ ವ್ಯಾಪಾರಿಗಳಿಂದಲೂ ಅಹವಾಲು ಆಲಿಸಿ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಲು ಕ್ರಮವಹಿಸುವಂತೆ ಸಲಹೆ ನೀಡಿದರು. ಅಲ್ಲದೆ, ವ್ಯಾಪಾರಕ್ಕೆ ಸೂಕ್ತವಾದ ಪ್ರದೇಶಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸಿಕೊಡುವುದರ ಜತೆಗೆ ನಿರ್ಬಂಧಿತ ಪ್ರದೇಶಗಳಲ್ಲಿ ವ್ಯಾಪಾರ ರಹಿತ ವಲಯಗಳೆಂದು ಫಲಕಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ, ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಡಿವೈಎಸ್‌ಪಿ ಸಂಜೀವ್‌ಕುಮಾರ್, ಪಾಲಿಕೆ ಅಧಿಕಾರಿ ಅನುಪಮಾ, ಬೀದಿಬದಿ ವ್ಯಾಪಾರಿ ಮಣಿಕಂಠ, ಚನ್ನವೀರಪ್ಪ ಗಾಮನಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಡಿಪೋ ಪಕ್ಕ ಸಂತೆಗೆ ಸೂಚನೆ

ಮಿಳ್ಳಘಟ್ಟ ರಸ್ತೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ಕೆಎಸ್‌ಆರ್‌ಟಿಸಿ ಡಿಪೋ ಪಕ್ಕದಲ್ಲಿ ಪರ್ಯಾಯವಾಗಿ ಗುರುತಿಸಿರುವ ಸ್ಥಳದಲ್ಲಿ ನಡೆಸಬೇಕು ಎಂದು ಗುರುದತ್ತ ಹೆಗಡೆ ಹೇಳಿದರು. ವಿನೋಬನಗರದ ಶಿವಾಲಯದ ಬಳಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಪಡೆದವರು ಬಳಸದೇ ಪುನಃ ರಸ್ತೆ ಬದಿ ವ್ಯಾಪಾರಕ್ಕೆ ಮುಂದಾಗಿರುವುದು ಸರಿಯಲ್ಲ. ಮಳಿಗೆಗಳನ್ನು ಪಡೆದವರು ಕೂಡಲೇ ಅಲ್ಲಿ ವಹಿವಾಟು ನಡೆಸಬೇಕು. ಇಲ್ಲವಾದಲ್ಲಿ ಅವುಗಳನ್ನು ಅಗತ್ಯವಿರುವವರಿಗೆ ವಿಲೇ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಣ್ಣು-ಹೂವಿನ ವ್ಯಾಪಾರಿಗಳನ್ನು ಸಮೀಪದ ಕನ್ಸರ್‌ವೆನ್ಸಿ ರಸ್ತೆಗಳಿಗೆ ಸ್ಥಳಾಂತರಗೊಳಿಸುವಂತೆ, ನಗರದ ಗೌರವ ಲಾಡ್ಜ್ ಸಮೀಪದ ನೂತನವಾಗಿ ನಿರ್ಮಿಸಿರುವ ಸಂಕೀರ್ಣಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಅವರು, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕೆ ನಗರದ 14 ಸ್ಥಳ ಗುರುತಿಸಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಒದಗಿಸಲು ಸೂಚಿಸಲಾಗಿದೆ ಎಂದರು.