ನ್ಯೂಸ್

ಇಡೀ ಸಿನಿಮಾ ಹಾಲ್​ ಬುಕ್​ ಮಾಡಿ ಉಚಿತ ಟಿಕೆಟ್ ವಿತರಿಸಿದ ಮಾಜಿ ಸಚಿವರ ಪುತ್ರ! 'ಗಂಧದಗುಡಿ' ವೀಕ್ಷಿಸಿದ ಎಲ್ಲರಿಗೂ ಸಸಿ ವಿತರಣೆ

ತುಮಕೂರು: ನಿನ್ನೆ(ಶುಕ್ರವಾರ) ಬಿಡುಗಡೆಯಾದ ನಟ ಡಾ. ಪುನೀತ್​ ರಾಜ್​ಕುಮಾರ್​ ಅಭಿನಯದ 'ಗಂಧದಗುಡಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅಪ್ಪುವನ್ನು ಕಣ್ತುಂಬಿಕೊಳ್ಳಲು ಥಿಯೇಟರ್​ ಬಳಿ ಸಹಸ್ರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಟಿಕೆಟ್​ಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ, ಇಡೀ ಸಿನಿಮಾ ಹಾಲ್​ ಬುಕ್​ ಮಾಡಿ ಅಪ್ಪು ಫ್ಯಾನ್ಸ್​ಗೆ ಉಚಿತವಾಗಿ 'ಗಂಧದಗುಡಿ' ಸಿನಿಮಾ ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ನಟ ಪುನೀತ್ ರಾಜ್​ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ(ಅ.29) ವರ್ಷ. ಪ್ರಥಮ ಪುಣ್ಯಸ್ಮರಣೆ ಹಿನ್ನೆಲೆ ಮಾಜಿ ಸಚಿವ ಸೊಗಡು ಶಿವಣ್ಣ ಪುತ್ರ ಕುಮಾರಸ್ವಾಮಿ ಎಂಬುವವರು ತುಮಕೂರಿನ ಎಸ್​.ಮಾಲ್​ನಲ್ಲಿರುವ ಐನಾಕ್ಸ್​ನ ಒಂದು ಸಿನಿಮಾ ಹಾಲ್​ ಅನ್ನೇ ಬುಕ್ ಮಾಡಿದ್ದಾರೆ. 250 ಅಭಿಮಾನಿಗಳಿಗೆ ಉಚಿತ ಟಿಕೆಟ್‌ ವಿತರಿಸಿದ ಕುಮಾರಸ್ವಾಮಿ, ಸಿನಿಮಾ ವೀಕ್ಷಿಸಿದ ಬಳಿಕ ಪ್ರತಿಯೊಬ್ಬರಿಗೂ ಸಸಿ ವಿತರಿಸಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ.

ಸೊಗಡು ಶಿವಣ್ಣರ ಪುತ್ರ ಕುಮಾರಸ್ವಾಮಿಗೆ ಅಪ್ಪು ಅಂದ್ರೆ ಪ್ರೀತಿ. ಪುನೀತ್​ರ ಅಪ್ಪಟ ಅಭಿಮಾನಿಯಾಗಿರೋ ಕುಮಾರಸ್ವಾಮಿ, ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಅರಣ್ಯ ಉಳಿಸುವ ಸಂದೇಶವಿದೆ. ಹಾಗಾಗಿ ಅವರ ಅಭಿಮಾನಿಗಳೂ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಮನವಿ ಮಾಡುತ್ತಾ ಸಸಿಗಳನ್ನು ವಿತರಿಸಿದರು. ಅಪ್ಪು ಪುಣ್ಯ ಸ್ಮರಣೆ ಹಿನ್ನೆಲೆ ರಾಜ್ಯಾದ್ಯಂತ ಹಲವೆಡೆ ಅಭಿಮಾನಿಗಳಿಂದ ಅನ್ನದಾನ ನಡೆಯುತ್ತಿದೆ.