ನ್ಯೂಸ್

ಕೆರೆ-ಕಟ್ಟೆ, ದೇಗುಲಗಳನ್ನು ಉಳಿಸಬೇಕಿದೆ

ಎ. ಆರ್. ರಘುರಾಮ

ಗಂಡಸಿ : ವಿಶ್ವಖ್ಯಾತಿಯ ಬೆಂಗಳೂರು ಮಹಾನಗರದಲ್ಲಿ ಕೆಂಪೇಗೌಡರು ನಿರ್ಮಿಸಿದ್ದ ಕೆರೆ-ಕಟ್ಟೆಗಳನ್ನು ಉಳಿಸಿಕೊಂಡು ಹೋಗುವತ್ತ ಗಮನ ಹರಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಗಂಡಸಿ ಹೋಬಳಿ ಆಲದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಏಷ್ಯಾ ಖಂಡದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರ ಸಿಲಿಕಾನ್ ಸಿಟಿಯಾಗಿ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಇದಕ್ಕೆ ನಾಡಪ್ರಭು ಕೆಂಪೇಗೌಡರೇ ಮೂಲ ಕಾರಣಕರ್ತರು. ದೂರದೃಷ್ಟಿಯ ಚಿಂತಕರಾಗಿದ್ದ ಅವರು ಎಲ್ಲ ಜನಾಂಗಗಳಿಗೆ ಸಾಮಾಜಿಕ, ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದ್ದರು ಎಂದರು.

ಮಹಾನಗರದಲ್ಲಿ ಎಲ್ಲ ಸಮುದಾಯವರಿಗೂ ಪ್ರತ್ಯೇಕವಾದ ಪೇಟೆ, ಪ್ರದೇಶ ಗಳನ್ನು ನಿರ್ಮಿಸಿದ ಹೆಗ್ಗಳಿಕೆ ಗೌಡರಿಗೆ ಸಲ್ಲುತ್ತದೆ. ನಗರದ ನೀರಾವರಿ ಸೌಕರ್ಯಗಳಿಗೆ ಅವರು ನಿರ್ಮಿಸಿದ ಕೆರೆ-ಕಟ್ಟೆಗಳು, ದೇಗುಲಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಶಲ್ ಕುಮಾರ, ಲಿಂಗಾಪುರ ವಾಸುದೇವ, ಜಿ.ಪಂ. ಮಾಜಿ ಅಧ್ಯಕ್ಷ ಹುಚ್ಚೇಗೌಡ, ವಿವಿಧ ಸಂಘ, ಸಂಸ್ಥೆ ಪ್ರಮುಖರಾದ ಯರಗನಾಳು ಮಲ್ಲೇಶ್, ಜಯರಾಮ್, ಮಲ್ಲಾಪುರ ಮಂಜುರಾಜ್, ರಾಮಚಂದ್ರು, ಪೂರ್ಣಚಂದ್ರ, ಕೃಷ್ಣೇಗೌಡ, ಮೋಹನ್ ಕುಮಾರ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಹಳ್ಳಿಗಳ 2,000ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದು ವಿಶೇಷವಾಗಿತ್ತು. ಎಲ್ಲರಿಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.