ಗಂಡಸಿ: ವಿಧಾನಸಭಾ ಚುನಾವಣೆಗೆ ಅರಸೀಕೆರೆ ಕ್ಷೇತ್ರದಿಂದ 4 ಬಾರಿ ಸ್ಪರ್ಧಿಸಿದಾಗಲೂ ಗಂಡಸಿ ಹೋಬಳಿಯ ಜನತೆ ಅತಿ ಹೆಚ್ಚು ಮತ ನೀಡಿ ನನ್ನನ್ನು ಜಯಶೀಲನನ್ನಾಗಿ ಮಾಡಿ ಹೋಬಳಿಯ ಮಗನಾದ ನನ್ನನ್ನು ಆಶೀರ್ವದಿಸಿದ್ದೀರಿ. ಆದ್ದರಿಂದ ಹೋಬಳಿಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಹೋಬಳಿಯ ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಲ್ ಬಳಿ ಗುರುವಾರ 32 ಕೋಟಿ ರೂ. ವೆಚ್ಚದ ಅರಸೀಕೆರೆಯಿಂದ ಗಂಡಸಿ ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ತಾಲೂಕಿನ ಗಡಿ ಕುಡುಕುಂದಿ ಗೇಟ್‌ವರೆಗಿನ 26 ಕಿ.ಮೀ. ಉದ್ದದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗಂಡಸಿ ಹ್ಯಾಂಡ್‌ಪೋಸ್ಟ್-ಹಾಸನ-ತಿಪಟೂರು, ಅರಸೀಕೆರೆ-ಚನ್ನರಾಯಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ವೃತ್ತವಾಗಿದ್ದು ಇಲ್ಲಿನ ಎಪಿಎಂಸಿ ಆವರಣದ 25 ಎಕರೆ ವಿಶಾಲವಾದ ಪ್ರದೇಶದಲ್ಲಿ ಪ್ರತಿ ಗುರುವಾರ ಸಂತೆ ನಡೆಯುತ್ತಿದ್ದು, ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಬೆಳವಣಿಗೆಗೆ ತಕ್ಕಂತೆ ಮೂಲ ಸೌಕರ್ಯಗಳ ಅವಶ್ಯಕತೆ ಇದ್ದು ಸುಸಜ್ಜಿತ ಬಸ್ ನಿಲ್ದಾಣ, ಹೈಟೆಕ್ ಶೌಚಗೃಹ ಸದ್ಯದಲ್ಲೇ ನಿರ್ಮಾಣ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಹಾಸನ ರಸ್ತೆಯಲ್ಲಿ ಸಮುದಾಯ ಭವನ ನಿರ್ಮಿಸಲು ಮುಂದಿನ ವಾರವೇ ಭೂಮಿಪೂಜೆ ನೆರವೇರಿಸಲಾಗುವುದು. ಇದಕ್ಕೆ ಸ್ಥಳೀಯ ನಾಯಕರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಶಾಲ್ಕುಮಾರ್(ಮೆಟ್ರೋ ಬಾಬು), ಗುತ್ತಿಗೆದಾರ ಪಿ.ಆರ್.ತಿಮ್ಮೇಗೌಡ, ಮಾಜಿ ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಲಿಂಗಾಪುರ ವಾಸುದೇವ್, ಮಲ್ಲಾಪುರ ಮಂಜುರಾಜ್, ಯರಗನಾಳು ಮಲ್ಲೇಶ್, ಎಪಿಎಂಸಿ ಮಾಜಿ ಸದಸ್ಯರಾದ ರಾಮಚಂದ್ರು, ಜಯರಾಮು, ತಾಪಂ ಮಾಜಿ ಸದಸ್ಯರಾದ ಪೂರ್ಣಚಂದ್ರ (ಆಗ್ರೋ ಬಾಬು) ಈಶ್ವರಪ್ಪ, ನಾಗರಹಳ್ಳಿ ಕೃಷ್ಣೇಗೌಡ, ವೆಂಕಟೇಶ್, ಬಸವನಪುರ ರಮೇಶ್, ಮಂಜೇನಹಳ್ಳಿ ಜಟ್ಟಿಗೌಡ, ಮರುಗೇಗೌಡ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಬಾಲಾಜಿ, ಎಇ ಮಲ್ಲೇಶ್ ಹಾಗೂ ಕಾರ್ಯಕರ್ತರು ಹಾಜರಿದ್ದರು.