ವಾಷಿಂಗ್ಟನ್: ಯಾವ ಅಭ್ಯಾಸವೂ ಚಟವಾಗಬಾರದು ಎಂದು ಹೇಳುತ್ತಾರೆ. ಅದೇ ರೀತಿ ಗೇಮರ್ ಒಬ್ಬ ಗೇಮಿಂಗ್ನ್ನೇ ಚಟವನ್ನಾಗಿ ಮಾಡಿಕೊಂಡ ಪರಿಣಾಮ ಆತನ ಮಲತಂದೆಯ ಜೀವವೇ ಹೋಗಿದ್ದು, ತಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಮಿಚಿಗನ್ನಲ್ಲಿ ವಾಸವಿರುವ ಕ್ರಿಸ್ಟೋಫರ್ (29) ಒಬ್ಬ ಗೇಮರ್. ಸದಾ ಗೇಮಿಂಗ್ನಲ್ಲೇ ಮುಳುಗಿರುವುದೇ ಈತನ ಅಭ್ಯಾಸ. ಅಂದು ಕೂಡ ಮಧ್ಯ ರಾತ್ರಿಯಾದರೂ ಗೇಮಿಂಗ್ನಲ್ಲೇ ಮುಳುಗಿದ್ದನಂತೆ. ಆತನ ಮಲತಂದೆ ಮತ್ತು ತಾಯಿಗೆ ನಿದ್ರೆ ಬಂದಿದ್ದರ ಹಿನ್ನೆಲೆ ಅವರು ಗೇಮ್ನ್ನು ನಿಲ್ಲಿಸಲು ಕೇಳಿದ್ದಾರೆ. ಆಟ ನಿಲ್ಲಿಸಿ, ಮಲಗು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಒಪ್ಪದ ಕ್ರಿಸ್ಟೋಫರ್ ಇದೇ ವಿಚಾರದಲ್ಲಿ ಅವರ ಜತೆ ಜಗಳವಾಡಿದ್ದಾನೆ. ಸಿಟ್ಟಿನಿಂದ ತಾಯಿಯ ಮೂಗಿಗೆ ಗುದ್ದಿದ್ದಾನೆ. ಆಕೆಯ ರಕ್ಷಣೆಗೆ ಬಂದ ಮಲತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಕ್ರಿಸ್ಟೋಫರ್ನಿಂದ ರಕ್ಷಿಸಿಕೊಳ್ಳಲು ಮಲತಂದೆ ಅಡುಗೆ ಮನೆಗೆ ಓಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕ್ರಿಸ್ಟೋಫರ್ ಚಾಕು ತೆಗೆದುಕೊಂಡು ಅದರಿಂದ ಮಲತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲವು ಬಾರಿ ಚಾಕು ಇರಿದು ಆತನ ಕೊಲೆ ಮಾಡಿದ್ದಾನೆ. ನಂತರ ತಾಯಿಗೂ ಚಾಕು ಇರಿದಿದ್ದಾನೆ.
ಕೊಲೆ ಮಾಡಿದ ನಂತರ ಪಕ್ಕದ ಮನೆಗೆ ಹೋಗಿ ವಿಚಾರ ತಿಳಿಸಿದ್ದಾನೆ. ಅವರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದು, ಪೊಲೀಸರು ಕ್ರಿಸ್ಟೋಫರ್ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)