ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನನಗೆ ತಂದೆಯ ರೀತಿ ಗೌರವ ಇದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಪಾವಗಡದಲ್ಲಿ ಭಾನುವಾರ ಪಕ್ಷದ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಯಡಿಯೂರಪ್ಪ ಅವರ ಹೆಸರು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಡೀ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷ ದಿನೇದಿನೆ ಬಲವರ್ಧನೆ ಆಗುತ್ತಿದೆ. ಈಗಾಗಲೇ 31 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಆಗಿದ್ದು. ಪಕ್ಷದ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಎಲ್ಲೇ ಹೋದರೂ ನಂಬಿಕೆ ಮತ್ತು ವಿಶ್ವಾಸದಿಂದ ಜನ ನಮ್ಮನ್ನು ಸ್ವಾಗತ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ನಾಗೇಂದ್ರ ಕುಮಾರ್ 60 ದಿನಗಳಿಂದಲೂ ನನ್ನ ಸಂಪರ್ಕದಲ್ಲಿದ್ದು, ಈ ಕ್ಷೇತ್ರದಲ್ಲಿ ಒಂದು ಸರ್ವೆ ಮಾಡಿಸಿದ್ದಾರೆ. ನನ್ನ ಪಕ್ಷ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಆಗುತ್ತದೆ ಎನ್ನುವುದು ಜನಗಳ ಭಾವನೆ. ಹೀಗಾಗಿ ಈ ಕ್ಷೇತ್ರದ ಅಭ್ಯರ್ಥಿಯಾಗಿ ನಾಗೇಂದ್ರ ಕುಮಾರ್ ಅವರನ್ನು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಕಡೆಯಿಂದ ಪಕ್ಷಕ್ಕೆ ಜನ ಬರುತ್ತಿದ್ದಾರೆ. ಅದೇ ರೀತಿ ಮಧುಗಿರಿ, ಪಾವಗಡದಲ್ಲಿ ಅತಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜನ ಪಕ್ಷಕ್ಕೆ ಬರುತ್ತಿದ್ದಾರೆ. ರಾಜ್ಯ ರಾಜಕೀಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಈಗಾಗಲೇ ನಮ್ಮ ಪಕ್ಷದಿಂದ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಗೆಲ್ಲುವ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ರೆಡ್ಡಿ ಹೇಳಿದ್ದಾರೆ.