ಗದ್ದರ್ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಗದ್ದರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರೊ. ರಾಜೇಂದ್ರ ಚೆನ್ನಿ, ಬಿ.ಚಂದ್ರೇಗೌಡ, ಕೆ.ಪಿ.ಶ್ರೀಪಾಲ್, ಕಲ್ಲೂರು ಮೇಘರಾಜ್, ಎನ್.ರವಿಕುಮಾರ್, ಕೆ.ವಿ.ಶಿವಕುಮಾರ್, ದೇಶಾದ್ರಿ ಹೊಸ್ಮನೆ, ಎಚ್.ಬಿ.ರಾಘವೇಂದ್ರ ಇತರರಿದ್ದರು.  
ನ್ಯೂಸ್

ಕಾವ್ಯವನ್ನೇ ಹೋರಾಟದ ಅಸ್ತ್ರ ಮಾಡಿಕೊಂಡಿದ್ದ ಗದ್ದರ್

ಶಿವಮೊಗ್ಗ: ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆಯುತ್ತಿವೆ. ನಾಗರಿಕತೆಯನ್ನೇ ನಾಶ ಮಾಡುವ ಶಕ್ತಿಗಳು ನಮ್ಮ ಮನೆಯ ಹೊಸ್ತಿಲಲ್ಲೇ ನಿಂತಿವೆ. ಈ ಸಂದರ್ಭದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ಅವರ ಚೈತನ್ಯ ಮರುಹುಟ್ಟು ಪಡೆಯಬೇಕಾದ್ದು ಅವಶ್ಯ ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು.

ಸಾಮಾಜಿಕ ಹೋರಾಟಗಾರ ಗದ್ದರ್ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಕಾಲದಲ್ಲಿ ಶಿವಮೊಗ್ಗ ಹೋರಾಟ, ಪ್ರತಿಭಟನೆಯ ತವರೂರಾಗಿತ್ತು. ಅದಕ್ಕೆ ಗದ್ದರ್ ಕೂಡ ನೀರೆರೆದಿದ್ದರು. ಆದರೆ ಇಂದು ಆ ಸನ್ನಿವೇಶ ಕಾಣದಾಗಿದೆ ಎಂದರು.
ಬಲಪಂಥೀಯ ಶಕ್ತಿಗಳು ಹೊಸ ರೂಪ ಪಡೆದು ಬೆಳೆಯಲು ಯತ್ನಿಸಿದಾಗ ಪ್ರತಿಭಟಿಸಿದ್ದು ಶಿವಮೊಗ್ಗದ ಪ್ರಗತಿಪರರು. ಬಿಜೆಪಿಯವರು ಬಾಬಾಬುಡನ್‌ಗಿರಿ ವಿಷಯ ಪ್ರಸ್ತಾಪಿಸಿದಾಗ ಅದರ ವಿರುದ್ಧ ಮೊದಲು ಚರ್ಚೆ ಆರಂಭವಾಗಿದ್ದೇ ಶಿವಮೊಗ್ಗದಲ್ಲಿ ಎಂದು ಸ್ಮರಿಸಿದರು.
ಇಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಪ್ರತ್ಯೇಕತೆ ಸಲ್ಲ. ಇದೇ ಕಾರಣಕ್ಕೆ ಬಾಬಾಬುಡನ್‌ಗಿರಿ ಬಗ್ಗೆ ಪ್ರಸ್ತಾಪವಾದಾಗ ಅದನ್ನು ಕೋಮು ಸೌಹಾದರ್ ವೇದಿಕೆ ಮೂಲಕ ಪ್ರತಿಭಟಿಸಲಾಯಿತು. ಇಂತಹ ಒಂದು ಪ್ರತಿಭಟನಾ ಸಭೆ ಚಿಕ್ಕಮಗಳೂರಿನಲ್ಲಿ ನಡೆದಾಗ ಗದ್ದರ್ ಕೂಡ ಭಾಗವಹಿಸಿದ್ದರು ಎಂದು ನೆನಪಿಸಿಕೊಂಡರು.
ಗದ್ದರ್ ಕಾವ್ಯವನ್ನೇ ರಾಜಕೀಯ ಕ್ರಿಯೆಯನ್ನಾಗಿಸಿಕೊಂಡಿದ್ದರು. ಎಲ್ಲ ಸೂಕ್ಷ್ಮ ಗೋಡೆಗಳನ್ನೂ ಅವರು ಒಡೆದಿದ್ದರು. ಕಾವ್ಯಕ್ಕೆ ಹೊಸ ರೂಪ ನೀಡಿದ್ದರು. ಯುಗದ ಚೈತನ್ಯವನ್ನೇ ಅವರು ಹೀರಿಕೊಂಡಂತಿತ್ತು. ಅವರು ಆಶಾವಾದದ ಸಂಕೇತವಾಗಿದ್ದರು. ಮಹಿಳೆಯರು, ರೈತರು, ಕಾರ್ಮಿಕ ವರ್ಗದ ವಿರುದ್ಧವಾಗಿದ್ದ ಸಂಗತಿಗಳನ್ನು ಪ್ರತಿಭಟಿಸಲು ಮಾದರಿಯಾಗಿದ್ದರು ಎಂದು ಬಣ್ಣಿಸಿದರು.
ಸಾಂಸ್ಕೃತಿಕ ಆಯಾಮ: ಪ್ರಗತಿಪರ ಚಳವಳಿಗೆ ಸಾಂಸ್ಕೃತಿಕ ಆಯಾಮ ನೀಡಿದ್ದು ಗದ್ದರ್. ಪ್ರಭುತ್ವದ ತಪ್ಪುಗಳಿಗೆ ಹೇಗೆ ಪ್ರತಿರೋಧಿಸಬೇಕು ಎಂಬುದನ್ನು ಜನರಿಗೆ ವಿವರಿಸಿದವರು ಅವರು. ತಾಸುಗಟ್ಟಲೆಯ ಭಾಷಣ ಉಂಟು ಮಾಡಬಹುದಾದ ಪರಿಣಾಮಕ್ಕಿಂತ ನಾಲ್ಕು ಸಾಲಿನ ಲಾವಣಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂಬುದಕ್ಕೆ ಗದ್ದರ್ ರಚಿಸಿ ಹಾಡುತ್ತಿದ್ದ ಹಾಡುಗಳೇ ನಿದರ್ಶನ ಎಂದು ಪತ್ರಕರ್ತ ಎನ್.ರವಿಕುಮಾರ್ ಬಣ್ಣಿಸಿದರು.
ವಕೀಲ ಕೆ.ಪಿ.ಶ್ರೀಪಾಲ್, ಸಾಹಿತಿ ಬಿ.ಚಂದ್ರೇಗೌಡ, ಪತ್ರಕರ್ತರಾದ ಕೆ.ವಿ.ಶಿವಕುಮಾರ್, ಎಚ್.ಬಿ.ರಾಘವೇಂದ್ರ, ದೇಶಾದ್ರಿ ಹೊಸ್ಮನೆ ಇದ್ದರು. ವಿವಿಧ ಸಂಘಟನೆಗಳ ಪ್ರಮುಖರು, ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸಭೆಯಲ್ಲಿ ಭಾಗವಹಿಸಿ ಗದ್ದರ್ ಅವರನ್ನು ನೆನಪಿಸಿಕೊಂಡರು.