ನ್ಯೂಸ್

"ಕಾಂಗ್ರೆಸ್​​ನಲ್ಲಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ? ...ನಾವು ಜಿ-23, ಜೀ ಹುಜೂರ್​ 23 ಅಲ್ಲ!"

ನವದೆಹಲಿ: ಪಂಜಾಬ್​ ಕಾಂಗ್ರೆಸ್​​ನಲ್ಲಿ ಮುಗಿಯದ ಬಿಕ್ಕಟ್ಟಿನ ಬೆನ್ನಲ್ಲೇ ಕೇರಳದಲ್ಲಿ ನಾಯಕತ್ವದ ಹೊಸ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾಯಿತ ಅಧ್ಯಕ್ಷರಿಲ್ಲದೆ ಪಕ್ಷ ನಡೆಸುತ್ತಿರುವ ವಿಪರ್ಯಾಸದ ಬಗ್ಗೆ ಕಾಂಗ್ರೆಸ್​ ಹೈಕಮ್ಯಾಂಡ್​ಗೆ ಜಿ-23 ನಾಯಕರು ಮತ್ತೆ ಪ್ರಶ್ನೆ ಹಾಕಿದ್ದಾರೆ.

ಪರೋಕ್ಷವಾಗಿ ಗಾಂಧಿ ಪರಿವಾರಕ್ಕೆ ಬೆಟ್ಟು ಮಾಡಿರುವ ಕಾಂಗ್ರೆಸ್​ನ ಹಿರಿಯ ನಾಯಕ ಕಪಿಲ್​ ಸಿಬಾಲ್​, ಕಾಂಗ್ರೆಸ್​ ಪಕ್ಷದಿಂದ ಜನರು ನಿರ್ಗಮಿಸುತ್ತಿರುವ ಬಗ್ಗೆ ಹಾಗೂ ಪಂಜಾಬ್​ನಲ್ಲಿ ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ತಕ್ಷಣ ಕಾಂಗ್ರೆಸ್​ ವರ್ಕಿಂಗ್​ ಕಮಿಟಿ(ಸಿಡಬ್ಲ್ಯೂಸಿ) ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

"ಕಾಂಗ್ರೆಸ್​​ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ. ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ" ಎಂದಿರುವ ಸಿಬಾಲ್​, "ನಾವು ಜಿ-23. ಖಂಡಿತವಾಗಿ ಜೀ ಹುಜೂರ್​ 23 ಅಲ್ಲ" ಎಂದು ಉದ್ಗರಿಸಿದ್ದಾರೆ. ಪಕ್ಷವನ್ನು ಹಲವರು ತೊರೆಯುತ್ತಿದ್ದಾರೆ. ಇದಕ್ಕೆ ನಮ್ಮ ತಪ್ಪುಗಳೇ ಕಾರಣವಾ ಅಂತ ಯೋಚಿಸಬೇಕು. ಪಕ್ಷದ ಮೂಲಚಿಂತನೆಯಿಂದ ನಾವು ದೂರವಾಗುತ್ತಿದ್ದೇವಾ ಎಂದು ಪರಾಮರ್ಶಿಸಬೇಕು ಎಂದು ಕಪಿಲ್ ಸಿಬಾಲ್​ ಹೇಳಿದ್ದಾರೆ. (ಏಜೆನ್ಸೀಸ್)