ಬೆಂಗಳೂರು (ಜುಲೈ 2): ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಬಿಜೆಪಿಯವರಿಗೆ ಅರ್ಥಮಾಡಿಕೊಳ್ಳಲು ಆಗುವುದಿಲ್ಲವೋ, ಅಲ್ಲಿಯವರೆಗೂ ಅವರು ಗೊಂದಲದಲ್ಲಿರುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: ನಾವೇ ನಿಮ್ಮ ಶಾಸಕರು, ಸರ್ಕಾರ… ಏನು ಬೇಕೋ ಅದನ್ನು ಪಡೆಯಲು ಈ ಚಾನ್ಸ್ ಬಿಡೋಕೆ ಹೋಗಬೇಡಿ… ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ
ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ" ಎಂದರು.
ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರಿಗೆ ಡಿ.ಕೆ. ಶಿವಕುಮಾರ್ ನೋಟಿಸ್ ಜಾರಿ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವರು, ನೋಟಿಸ್ ನೀಡುವುದು ಅಧ್ಯಕ್ಷರು ಮಾಡುವ ಕೆಲಸ. ಕಾರ್ಯಕರ್ತರು, ಶಾಸಕರು, ಸಚಿವರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದಾಗಿ ಹೇಳಿದ್ದಾರೆ ಎಂಬರ್ಥದಲ್ಲಿ ಅರ್ಥೈಸಿಕೊಂಡಿದ್ದೇನೆ. ಪಕ್ಷದ ಮತ್ತು ಅಧ್ಯಕ್ಷರ ದೃಷ್ಟಿಯಲ್ಲಿ ಸರಿ ಇಲ್ಲ ಎಂಬುದು ಕಂಡು ಬಂದರೆ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.