ನ್ಯೂಸ್

ಬಳ್ಳಾರಿ ನಗರ ಕ್ಷೇತ್ರದ KRPP ಅಭ್ಯರ್ಥಿ ಘೋಷಣೆ: ಸಹೋದರನ ವಿರುದ್ಧ ಪತ್ನಿಯನ್ನೇ ಕಣಕ್ಕಿಳಿಸಿದ ಜನಾರ್ದನ ರೆಡ್ಡಿ

ಬಳ್ಳಾರಿ: ಕಳೆದ ಡಿಸೆಂಬರ್​ 25ರಂದು "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ" (KRPP) ಹೆಸರಿನಲ್ಲಿ ಹೊಸ ಪಕ್ಷ ಘೋಷಣೆ ಮಾಡಿ, ಮತ್ತೆ ರಾಜಕೀಯ ಪ್ರವೇಶ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದ್ದು, ಇಂದು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಹೆಸರನ್ನು ಇಂದು ಅಧಿಕೃತವಾಗಿ ಜನಾರ್ದನ ರೆಡ್ಡಿ ಅವರು ಘೋಷಣೆ ಮಾಡಿದ್ದಾರೆ.

ಗಂಗಾವತಿಯ ಆನೇಗೊಂದಿಯಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದ ಜನಾರ್ದನ ರೆಡ್ಡಿ, ತಮ್ಮ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ ಪತ್ನಿಯನ್ನೇ ಕಣಕ್ಕಿಳಿಸಲು ಸಜ್ಜಾಗಿದ್ದಾರೆ.

ಮಗಳನ್ನು ಸಹ ರಾಜಕೀಯ ಕರೆತರಲು ರೆಡ್ಡಿ ಪ್ಲಾನ್​ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಗಳು ಸ್ಪರ್ಧಿಸುವ ಕ್ಷೇತ್ರವೂ ಘೋಷಣೆಯಾದರೆ ಅಚ್ಚರಿಪಡಬೇಕಿಲ್ಲ. ಬಳ್ಳಾರಿ ತವರು ಕ್ಷೇತ್ರವಾದರೂ ಈ ಬಾರಿ ಗಂಗಾವತಿಯಿಂದ ರಾಜಕೀಯ ಮರು ಪ್ರವೇಶ ಮಾಡಿರುವ ರೆಡ್ಡಿ, ಬಳ್ಳಾರಿಯನ್ನು ಬಿಟ್ಟು ಕೊಡದೇ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದಲೇ ತಮ್ಮ ಪಕ್ಷದ ಮೊದಲ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)