ನ್ಯೂಸ್

ಜಿ-20 ಶೃಂಗಸಭೆಯಲ್ಲಾದ ಒಡಂಬಡಿಕೆ ತಿಂಗಳಲ್ಲೇ ಸಾಕಾರ: ಎಚ್‌ಪಿಸಿಎಲ್​ನಿಂದ ‘ಎಕ್ಸ್‌ಪ್ರೆಸ್ ಸೇವಾ ಕೇಂದ್ರ’ಕ್ಕೆ ಚಾಲನೆ

ಬೆಂಗಳೂರು: ನಿರ್ಮಾಣ ಹಂತದ ಕೊನೆಯ ಘಟ್ಟದಲ್ಲಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಮಾರ್ಗದಲ್ಲಿ ಪೆಟ್ರೋಲ್ ಬಂಕ್ ಜತೆಗೆ ವಾಹನಗಳ ತುರ್ತು ದುರಸ್ತಿ ಒಳಗೊಂಡ ಸರ್ವಿಸ್ ಸೆಂಟರ್‌ಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. (ಎಚ್‌ಪಿಸಿಎಲ್) ಚಾಲನೆ ನೀಡಿದೆ. ಇಂಥದ್ದೊಂದು ಪರಿಕಲ್ಪನೆ ತಿಂಗಳ ಹಿಂದೆ ನಡೆದ ಜಿ-20 ಶೃಂಗಸಭೆಯಲ್ಲಿ ಮೂಡಿಬಂದಿತ್ತು. ಅದೀಗ ಕಾಲಮಿತಿಯಲ್ಲಿ ಸಾಕಾರವಾಗಿದೆ.

ಇತ್ತೀಚಿಗೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆಗಳು ಆಯೋಜನೆಗೊಂಡಿದ್ದವು. ಅಲ್ಲಿ ಸದಸ್ಯ ರಾಷ್ಟ್ರಗಳೊಂದಿಗೆ ವ್ಯಾಪಾರ-ವಹಿವಾಟು, ಹೂಡಿಕೆಗೆ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಹಾಕಿದ್ದವು. ಈ ಪೈಕಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಮೂಲದ ಪೆಟ್ರೋಮಿನ್ ಕಾರ್ಪೊರೇಶನ್ ಎಚ್‌ಪಿಸಿಎಲ್‌ನೊಂದಿಗೆ ಸೆ.11ರಂದು ಒಪ್ಪಂದ ಮಾಡಿಕೊಂಡಿದ್ದವು.

ಇದರನ್ವಯ ದೇಶದ ಆಟೋಮೊಬೈಲ್ ಸೇವಾ ವಿಭಾಗದಲ್ಲಿ ಟೆಕ್‌ಚಾಲಿತ ಇಕೋ ಸಿಸ್ಟಂ ನಿರ್ಮಿಸಲು ಎರಡೂ ಕಂಪನಿಗಳು ಒಪ್ಪಿಗೆ ಸೂಚಿಸಿ ಕಾರ್ಯ ಆರಂಭಿಸಿದ್ದವು. ಶೃಂಗಸಭೆಯಲ್ಲಾದ ಒಡಂಬಡಿಕೆಯಂತೆ ಒಂದೇ ತಿಂಗಳಲ್ಲೇ ಸಾಕಾರವಾಗಿದ್ದು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ 16 ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಸೋಮವಾರ ಬೆಂಗಳೂರಿನ ಪೀಣ್ಯದ ಮೆಟ್ರೋ ನಿಲ್ದಾಣದ ಬಳಿ ಸೇವಾ ಕೇಂದ್ರಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌ಪಿಸಿಎಲ್ ಇಂಡಿಯಾ ಅಧ್ಯಕ್ಷ ಹಾಗೂ ಎಂಡಿ ಡಾ. ಪಿ.ಕೆ.ಜೋಶಿ, ಮುಂದಿನ ಕೆಲ ವರ್ಷಗಳಲ್ಲಿ ದೇಶಾದ್ಯಂತ 1000 ಎಚ್‌ಪಿ ಪೆಟ್ರೋಮಿನ್ ಎಕ್ಸ್‌ಪ್ರೆಸ್ ಕೇಂದ್ರಗಳನ್ನು ತೆರೆಯಲಾಗುವುದು. ಮೊದಲ ಹಂತದಲ್ಲಿ 16 ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳು ವಾಕ್ ಇನ್ ಗ್ರಾಹಕ, ಮೂಲ ನಿರ್ವಹಣಾ ಸೇವೆಗಳನ್ನು 30 ನಿಮಿಷಗಳ ದಾಖಲೆ ಸಮಯದಲ್ಲಿ ಪೂರ್ಣಗೊಳಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

5 ಸಾವಿರ ಉದ್ಯೋಗ ಸೃಷ್ಟಿ:

ಪೆಟ್ರೋಮಿನ್ ಇಂಡಿಯಾ ಎಂಡಿ ಅಶ್ನತ್ ಚೋಪ್ರಾ ಮಾತನಾಡಿ, ನೂತನ ಸರ್ವಿಸ್ ಸೆಂಟರ್‌ಗಳಲ್ಲಿ ವಾಹನಗಳಿಗೆ ತೈಲ ತುಂಬಿಸಿಕೊಳ್ಳುವ ಸೌಲಭ್ಯದ ಜತೆಗೆ ವಾಹನಗಳ ತುರ್ತು ದುರಸ್ತಿಗೂ ಅವಕಾಶ ನೀಡಲಾಗಿದೆ. ಇಂತಹ ಸೌಲಭ್ಯಗಳನ್ನು ಎಚ್‌ಪಿಸಿಎಲ್ ಔಟ್‌ಲೆಟ್‌ಗಳಲ್ಲಿ ಪರಿಚಯಿಸಲಾಗಿದೆ. ಅತ್ಯುತ್ತಮ ನಿರ್ವಹಣಾ ಸೇವೆಯಿಂದ ಹಬ್ ಮಾದರಿಯ ಗ್ಯಾರೇಜ್ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ರಿಪೇರಿಯನ್ನು ಕಡಿಮೆ ಅವಧಿಯಲ್ಲಿ ಕೈಗೊಳ್ಳಲಾಗುತ್ತದೆ. ಇದರಿಂದ ಹೆದ್ದಾರಿ ಸಂಚಾರ ಸುಗಮವಾಗಲಿದ್ದು, ಭವಿಷ್ಯದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.