ಬೆಂಗಳೂರು: ಜಿ-20 ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪು (ಡಿಇಡಬ್ಲ್ಯುಜಿ) ಮುನ್ನಡೆಸುತ್ತಿದ್ದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ ಮತ್ತು ಡಿಜಿಟಲ್ ಕೌಶಲ್ಯ - ಈ ಮೂರು ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಈ ಆದ್ಯತೆಯ ಕ್ಷೇತ್ರಗಳಲ್ಲಿ ಒಮ್ಮತ ಮೂಡಿಸಲು ಈಗಾಗಲೇ ಲಕ್ನೋ, ಹೈದರಾಬಾದ್ ಮತ್ತು ಪುಣೆಯಲ್ಲಿ ಸಭೆಗಳನ್ನು ನಡೆಸಲಾಗಿದೆ. ನಾಲ್ಕನೇಯ ಹಾಗೂ ಅಂತಿಮ ಸಭೆಯಲ್ಲಿ ಈ ವಿಚಾರಗಳಿಗೆ ಸ್ಪಷ್ಟ ಚೌಕಟ್ಟು ನೀಡಲಾಗುತ್ತದೆ. ಇದರಿಂದಾಗಿ ಆ.19ರಂದು ನಿಗದಿಯಾಗಿರುವ ಡಿಜಿಟಲ್ ಆರ್ಥಿಕ ಸಚಿವರ ಸಭೆಯಲ್ಲಿ (ಡಿಇಎಂಎಂ) ಪರಿಗಣನೆ ಮತ್ತು ಸ್ವೀಕಾರಕ್ಕಾಗಿ ಘೋಷಣೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಘೋಷಣೆ ಕರಡಿನ ಮೇಲೆ ಚರ್ಚೆ:
ಜಿ-20 ಡಿಇಡಬ್ಲ್ಯುಜಿ ರ ಅಧ್ಯಕ್ಷ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಲ್ಕೇಶ್‌ಕುಮಾರ್ ಶರ್ಮಾ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಂತರ್ಗತ, ನಿರ್ಣಾಯಕ, ಮಹತ್ವಾಕಾಂಕ್ಷಿ ಮತ್ತು ಕಾರ್ಯ-ಆಧಾರಿತ ಆದ್ಯತೆಯ ಕ್ಷೇತ್ರಗಳಿಗೆ ಒತ್ತು ನೀಡಿ ಮಾತನಾಡಿದರು.
ಜಿ-20 ಡಿಜಿಟಲ್ ಆರ್ಥಿಕತೆ ಸಚಿವರ ಘೋಷಣೆ ಕರಡಿಗೆ ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಳ್ಳುವಲ್ಲಿ ಕೊಡುಗೆ ನೀಡಿದ ಜಿ-20 ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದರು. ಜ್ಞಾನದ ಫಲಿತಾಂಶಗಳು ಜಾಗತಿಕ ಡಿಜಿಟಲ್ ಆರ್ಥಿಕತೆಗೆ ಗಣನೀಯವಾಗಿ ಸಹಾಯ ಮಾಡುತ್ತವೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.
ನಂತರ, ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕರಡು ಜಿ-20 ಡಿಜಿಟಲ್ ಆರ್ಥಿಕ ಸಚಿವರ ಘೋಷಣೆ ಕುರಿತು ವಿವರವಾದ ಚರ್ಚೆಗಳು ನಡೆದವು. ಡಿಇಡಬ್ಲ್ಯುಜಿ ಯಲ್ಲಿನ ಚರ್ಚೆಗಳು ಆ.17ರಂದೂ ಮುಂದುವರಿಯಲಿದೆ.
ಸಭೆಯಲ್ಲಿ ಜಿ-20 ಸದಸ್ಯರು, 9 ಆಹ್ವಾನಿತ ದೇಶಗಳು ಮತ್ತು 5 ಅಂತರರಾಷ್ಟ್ರೀಯ ಸಂಸ್ಥೆಗಳಾದ ಒಇಸಿಡಿ, ಐಟಿಯು, ಯುಎನ್ಡಿಪಿ, ವಿಶ್ವ ಬ್ಯಾಂಕ್ ಮತ್ತು ಯುನೆಸ್ಕೋದಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಡಿಇಡಬ್ಲ್ಯುಜಿ ಸಹ ಅಧ್ಯಕ್ಷ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಶೀಲ್ ಪಾಲ್ ಇದ್ದರು.
3 ದಿನ ಡಿಐಎ ಸಭೆ:
ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ (ಡಿಐಎ) ಶೃಂಗಸಭೆ ನಗರದ ಅರಮನೆ ಮೈದಾನದಲ್ಲಿ ಪ್ರತ್ಯೇಕವಾಗಿ ಆ.17-19ರವರೆಗೆ ನಿಗದಿಯಾಗಿದೆ. ಇದರ ಹೊರತಾಗಿ ಡಿಜಿಟಲ್ ಆರ್ಥಿಕ ಸಚಿವರ ಸಭೆ (ಡಿಇಎಂಎಂ) ಆ.19ರಂದು ನಡೆಯಲಿದೆ.