ನ್ಯೂಸ್

ಸಂಪುಟ ರಚನೆ ಹಾಗೂ ವಿಸ್ತರಣೆಗೆ ಕಸರತ್ತು ಆರಂಭಿಸಿದ ಭಾವಿ ಸಿಎಂ; ಡಿಕೆಶಿ-ಸಿದ್ದು ಮತ್ತೆ ದೆಹಲಿಗೆ

ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್ ಪಕ್ಷ, ಸರ್ಕಾರ ರಚನೆಗೆ ರಾಜ್ಯಪಾಲರ ಮುಂದೆ ಹಕ್ಕು ಮಂಡನೆ ಮಾಡಲಿದ್ದು ಶನಿವಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ವೇಳೆ ಕೆಲ ಸಚಿವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು ಹಾಗಾಗಿ ಕ್ಯಾಬಿನೆಟ್ ವಿಸ್ತರಣೆ ಕಸರತ್ತನ್ನು ಭಾವಿ ಸಿಎಂ ಆರಂಭಿಸಿದ್ದಾರೆ. ಅದಕ್ಕಾಗಿ ಇಂದು ಮತ್ತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿ ಪ್ರಯಾಣ ಮಾಡಲಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಬಳಿಕ ಇಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಂದು 10 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಚಿವ ಸಂಪುಟ ರಚನೆ ಬಗ್ಗೆ ಹೈಕಮಾಂಡ್ ನಾಯಕರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆ ಚರ್ಚೆ ನಡೆಸಲಿದ್ದು ನಾಳೆ ಸಿಎಂ, ಡಿಸಿಎಂ ಜೊತೆ ಹಲವು ಸಚಿವರ ಪ್ರಮಾಣ ವಚನ ಸ್ವೀಕಾರಿಸುವ ಎಲ್ಲಾ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ 20ರಿಂದ 25 ಮಂದಿ ಸಚಿವರ ನೇಮಕ ಮಾಡುವ ಸಾಧ್ಯತೆ ಇದ್ದು ಯಾರನ್ನೆಲ್ಲ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಇಂದು ತೀರ್ಮಾನ ಮಾಡಲಾಗುತ್ತದೆ. ಈ ಬಗ್ಗೆ ದಿಗ್ವಿಜಯ ನ್ಯೂಸ್ ಮಾಹಿತಿ ನೀಡಿದೆ.

ಈಗಾಗಲೇ ಹೈಕಮಾಂಡ್ ಸಚಿವರ ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು ಅದರಲ್ಲಿ ಕೆಲವು ಹೆಸರುಗಳಿಗೆ ಹೈಕಮಾಂಡ್​ನಿಂದ ಗ್ರೀನ್ ಸಿಗ್ನಲ್ ಸಿಗಲಿದೆ. ಈ ಶನಿವಾರ ಸಿಎಂ ಜೊತೆಗೆ ಕೆಲ ಸಚಿವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.