Bengaluru Traffic (ಚಿತ್ರ X)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಹಾಗೂ ಗಣ್ಯರ (ವಿಐಪಿ) ಸಂಚಾರದ ವೇಳೆ ವಿಧಿಸಲಾಗುವ ಸಂಚಾರ ನಿರ್ಬಂಧಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಮತ್ತೊಮ್ಮೆ ಬೀದಿಗೆ ಬಂದಿದೆ. ನಗರದ ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲೇ ಕುಳಿತು (Bengaluru Traffic) ಸಾರ್ವಜನಿಕ ರಸ್ತೆಯನ್ನು ಮುಚ್ಚಿದನ್ನು ಪ್ರಶ್ನಿಸುತ್ತಿರುವ ವಿಡಿಯೋವೊಂದು ಎಲ್ಲಡೆ ವೈರಲ್ ಆಗಿದೆ.
ನನ್ನ ಹೆಂಡತಿ ಗರ್ಭಿಣಿ, ಏನಾದರೂ ಆದ್ರೆ ಯಾರು ಹೊಣೆ?
ವರದಿಗಳ ಪ್ರಕಾರ, ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್ಜಾಮ್ನಲ್ಲಿ ಸಿಲುಕಿಕೊಂಡಿದ್ದರು. ಆದಾಗ್ಯೂ, ವಿಐಪಿ ಕಾರುಗಳು ಸುಗಮವಾಗಿ ಸಾಗಲಿ ಎಂಬ ಕಾರಣಕ್ಕೆ ಸಂಚಾರ ಪೊಲೀಸರು ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು.
ಇದರಿಂದ ಕೋಪಗೊಂಡ ವ್ಯಕ್ತಿಯು ಕಾರಿನಿಂದ ಕೆಳಗಿಳಿದು ನೇರವಾಗಿ ಪೊಲೀಸರ ಬಳಿ ಆಗಮಿಸಿ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲೂ ರಸ್ತೆ ಬಂದ್ ಮಾಡಿದರೆ ನಾವೇನು ಮಾಡಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಮಧ್ಯಪ್ರವೇಶಿಸಿದ ಪೊಲೀಸರು!
ರಸ್ತೆ ಮಧ್ಯೆ ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಮತ್ತು ಗರ್ಭಿಣಿ ಮಹಿಳೆಯ ವೈದ್ಯಕೀಯ ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಂಚಾರ ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳದಲ್ಲಿ ಮಧ್ಯಪ್ರವೇಶಿಸಿ ಆಕ್ರೋಶಗೊಂಡಿದ್ದ ಪತಿಯನ್ನು ಸಮಾಧಾನ ಪಡಿಸಲು ಮುಂದಾದರು.
ಪತಿಯೊಂದಿಗೆ ಮಾತನಾಡಿ ಸಹಾಯದ ಭರವಸೆ ನೀಡಿದ ನಂತರ, ಆ ವ್ಯಕ್ತಿ ಶಾಂತಗೊಂಡು ಸ್ಥಳದಿಂದ ಹೊರಟು ಹೋದರು ಮತ್ತು ಸಾಮಾನ್ಯ ಸಂಚಾರ ಪುನರಂಭವಾಯಿತು.
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರು ಮಹಿಳೆಯೊಬ್ಬರನ್ನು ಎದುರಿಸಿದ ಕೆಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆದಾಗ್ಯೂ, ತನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದ ಮಹಿಳೆ, ಪ್ರತಿಭಟನೆಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಸಚಿವರ ಮೇಲೆ ತಮ್ಮ ಕೋಪವನ್ನು ಹೊರಹಾಕಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು (ಏಜೆನ್ಸೀಸ್).