ಬೆಂಗಳೂರು: ಕಾಮಗಾರಿಯೇ ನಡೆಸದೆ ಹಣ ಬಿಡುಗಡೆ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ, ಇಡಿ, ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿರುವುದಾಗಿ ಮಾಜಿ ಸಚಿವ ಮುನಿರತ್ನ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ೪೨ ನಕಲಿ ಕಾಮಗಾರಿ ಬಿಲ್ ಬಿಡುಗಡೆ ಹಂತದಲ್ಲಿದೆ. ೯.೫ ಕೋಟಿಯ ನಕಲಿ ಕಾಮಗಾರಿ ಬಿಲ್ ಬಿಡುಗಡೆಗೆ ಸಿದ್ದವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ನಾನು ಲೋಕಾಯುಕ್ತ ಹಾಗೂ ಇಡಿಗೆ ನಾನು ದೂರು ನೀಡಿದ್ದೇನೆ. ತನಿಖೆ ಪ್ರಾರಂಬವಾಗಿ ಸತ್ಯ ಹೊರಗೆ ಬರಲಿ ಎಂದು ಹೇಳಿದ್ದಾರೆ.
ವಾರ್ಡ್ ನಂ. ೪೨ರಲ್ಲಿನ ಲಕ್ಷ್ಮೀದೇವಿ ನಗರ, ಹಾವಾಡಿಗರ ಕಾಲೋನಿ, ಕಾವೇರಿನಗರ, ನಂದಿನಿ ಲೇಔಟ್ ಮುಂತಾದ ಪ್ರದೇಶಗಳ ರಸ್ತೆ ಅಭಿವೃದ್ದಿ, ಫುಟ್‌ಪಾತ್ ಅಭಿವೃದ್ದಿ, ಚರಂಡಿ ನಿರ್ಮಾಣ ಕಾಮಗಾರಿ ನಡೆಸದೇ ಬಿಲ್ ಸಲ್ಲಿಕೆ ಮಾಡಲಾಗಿದೆ ಎಂದು ದೂರಿದ್ದಾರೆ.
ಕಾಮಗಾರಿ ನಡೆಸದೆಯೇ ಬಿಲ್ ಸಲ್ಲಿಕೆ ಪತ್ತೆಯಾಗಿದೆ. ಸರಿ ಸುಮಾರು ೯.೫ ಕೋಟಿ ಮೊತ್ತದ ೪೨ ಕಾಮಗಾರಿ ನಾಪತ್ತೆ ಆಗಿದ್ದು ಸದರಿ ಕಾಮಗಾರಿಗಳ ಸ್ಥಳ ಪರೀಶೀಲನೆಯ ನಂತರವೇ ಬಿಲ್ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿ ಮನವಿ ಮಾಡಲಾಗಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕ, ರಾಜಕೀಯ ದುರದ್ದೇಶದಿಂದ ಈ ರೀತಿಯ ದೂರುಗಳು ಕೊಟ್ಟಿರಬಹುದು. ಹಾಸ್ಯಾಸ್ಪದ ಎಂದರೆ ಮೂರು ವರ್ಷಗಳಿಂದ ಮುನಿರತ್ನ ಏನು ಮಾಡುತ್ತಿದ್ದರು. ಅವರದ್ದೇ ಸರ್ಕಾರ ಇದ್ದಾಗ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.