ನ್ಯೂಸ್

ಲಂಕಾ ಪಾತಕಿಗಳಿಗೆ ಫಂಡಿಂಗ್; ಮತ್ತಿಬ್ಬರು ಸಿಸಿಬಿ ಬಲೆಗೆ

ಬೆಂಗಳೂರು: ಶ್ರೀಲಂಕಾ ಮೂಲದ ಬಂಧಿತ ಮೂವರು ಪಾತಕಿಗಳಿಗೆ ಹಣದ ನೆರವು ನೀಡುತ್ತಿದ್ದ ಆರೋಪಿ ಸೇರಿ ಮತ್ತಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಎ.ಎಸ್.ಕೆ. ಮನ್ಸೂರ್ ಅಲಿ ಮತ್ತು ಬೆಂಗಳೂರಿನ ವಿವೇಕನಗರ ಎಂ. ಅನ್ಬಳಗನ್ ಬಂಧಿತರು. ಶ್ರೀಲಂಕಾ ಪಾತಕಿಗಳಿಗೆ ಕೊಡಲು ಮನ್ಸೂರ್ ಸಂಗ್ರಹಿಸಿದ್ದ 57 ಲಕ್ಷ ರೂ. ನಗದು, 1.5 ಕೋಟಿ ರೂ. ಮೌಲ್ಯದ ಡಿಡಿ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಲು ಖರ್ಚು ವೆಚ್ಚಕ್ಕೆಂದು 57 ಲಕ್ಷ ರೂ. ಹೊಂದಿಸಿದ್ದ ಮನ್ಸೂರ್, ಕೆಲವೇ ದಿನಗಳಲ್ಲಿ ಆ ಹಣವನ್ನು ಆರೋಪಿಗಳಿಗೆ ತಲುಪಿಸಲು ಸಿದ್ಧತೆ ನಡೆಸಿದ್ದ. ಹಣ ತಮ್ಮ ಕೈಸೇರಿದ ಬಳಿಕ ಬೆಂಗಳೂರಿನಿಂದ ಇತರೆಡೆಗೆ ತೆರಳಲು ಆರೋಪಿಗಳು ಸಜ್ಜಾಗಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಕೊಲೆ, ಗ್ಯಾಂಗ್ ವಾರ್ ಕೃತ್ಯಗಳಲ್ಲಿ ಭಾಗಿಯಾಗಿ, ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಕಸನ್ ಕುಮಾರ್ ಸಂಕ (36), ಅಮಿಲಾ ನುವಾನ್ ಅಲಿಯಾಸ್ ಗೋತಾ ಸಿಲ್ವಾ (36) ರಂಗಪ್ರಸಾದ್ ಅಲಿಯಾಸ್ ಚುಟ್ಟಾ (36) ಹಾಗೂ ಬೆಂಗಳೂರಿನಲ್ಲಿ ನೆಲೆಸಲು ಆಶ್ರಯ ನೀಡಿದ್ದ ಜೈ ಪರಮೇಶ್ (42) ಎಂಬಾತನನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ಮನ್ಸೂರ್ ಮತ್ತು ಅನ್ಬಳಗನ್ ಮಾಹಿತಿ ಲಭ್ಯವಾಯಿತು. ಇದರ ಮೇರೆಗೆ ಚೆನ್ನೈನಲ್ಲಿ ಮನ್ಸೂರ್‌ನನ್ನು ಸೆರೆಹಿಡಿಯಲಾಗಿದೆ. ಆರೋಪಿಗಳು ಸಮುದ್ರ ಮಾರ್ಗದಲ್ಲಿ ತಮಿಳುನಾಡಿಗೆ ಬಂದು ಸೇಲಂನಿಂದ ನಗರಕ್ಕೆ ಬರಲು ನೆರವಾಗಿದ್ದ ಒಮಾನ್ ದೇಶದಲ್ಲಿ ತಲೆಮರೆಸಿಕೊಂಡಿರುವ ಜಲಾಲ್, ಮಾರ್ಗದರ್ಶನದಂತೆ ಮನ್ಸೂರ್ ಕೆಲಸ ಮಾಡುತ್ತಿದ್ದ.

ಬೆಂಗಳೂರಿನಲ್ಲಿರುವ ಶ್ರೀಲಂಕಾ ಪ್ರಜೆಗಳಿಗೆ 50 ಲಕ್ಷ ರೂ. ನೀಡುವಂತೆ ಮನ್ಸೂರ್‌ಗೆ ಜಲಾಲ್ ಸೂಚಿಸಿದ್ದ. ಅದರಂತೆ ಶ್ರೀಲಂಕಾ ಪ್ರಜೆಗಳ ಖರ್ಚು ವೆಚ್ಚಕ್ಕೆಂದು ಹಣ ನೀಡಲು ಮನ್ಸೂರ್ ಸಿದ್ಧವಾಗಿದ್ದ. ಹಣ ಸಿಕ್ಕ ಕೂಡಲೇ ನೇಪಾಳದಲ್ಲಿ ಇರುವ ಸಂಜೀವ್ ಎಂಬಾತನ ಜತೆ ಸೇರಿಕೊಳ್ಳಲು ಆರೋಪಿಗಳು ಸಿದ್ಧವಾಗಿದ್ದರು. ಸಂಜೀವ್ ಜತೆ ಸಿಂಹಳಿ ಭಾಷೆಯಲ್ಲಿ ಬಂಧಿತರು ನಡೆಸಿರುವ ಮೊಬೈಲ್ ಸಂಭಾಷಣೆ ಲಭಿಸಿದೆ.

ಆರೋಪಿಗಳಿಗೆ ಸಿಂಹಳಿ ಬಿಟ್ಟರೆ ಉಳಿದ ಭಾಷೆ ಗೊತ್ತಿಲ್ಲ. ಅದಕ್ಕಾಗಿ ಭಾಷಾಂತರ ಮಾಡುವರ ನೆರವು ಪಡೆಯಲಾಗುತ್ತಿದೆ. ಜಲಾಲ್ ನಿರ್ದೇಶನದಂತೆ ಜೈಪರಮೇಶ್, ಶ್ರೀಲಂಕಾದಿಂದ ಬಂದ ಪಾತಕಿಗಳಿಗೆ ಆಶ್ರಯ ನೀಡಿದ್ದ. ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ಸೆ. 1ರವರೆಗೂ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.