ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಕ್ಯಾಲೆಂಡರ್ ಅನ್ನು ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಬಿಡುಗಡೆಗೊಳಿಸಿದರು. ಮೋಹನ್‌ಕುಮಾರ್, ಡಾ. ಸಿ.ಎ.ಹಿರೇಮಠ, ಪಾಪಣ್ಣ, ಸಿದ್ಧಬಸಪ್ಪ ಇದ್ದರು. 
ನ್ಯೂಸ್

ನೌಕರರ ಆಶೋತ್ತರ ಈಡೇರಿಕೆ ನನ್ನ ಗುರಿ: ಸಿ.ಎಸ್.ಷಡಾಕ್ಷರಿ

ಶಿವಮೊಗ್ಗ: ಚುನಾವಣೆಯಲ್ಲಿ ಆರೋಪ, ಪ್ರತ್ಯಾರೋಪ ಸಹಜ. ಇತಿಹಾಸ, ವರ್ತಮಾನ ಹಾಗೂ ಭವಿಷ್ಯದ ಚಿಂತನೆಗಳಿಲ್ಲದೆ ಕೆಲವರು ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಕೆಲಸ ಮಾಡಿದ್ದೇನೆ. ಅವರ ಆರೋಪಗಳೇ ನನಗೆ ಗೆಲುವಿನ ಅಸ್ತ್ರವಾದವು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಚುನಾವಣೆಯಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಂಘ ಗೆದ್ದಿದೆ. ಮೊದಲ ಬಾರಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಶೇ.90ರಷ್ಟು ಭರವಸೆಗಳನ್ನು ಈಡೇರಿಸಿ ನೌಕರರ ಕಣ್ಣೀರು ಒರೆಸಿದ್ದೇನೆ. ಈ ಬಾರಿ ನೌಕರರಿಗೆ ಕೇಂದ್ರ ಮಾದರಿ ವೇತನ, ಎನ್‌ಪಿಎಸ್ ರದ್ದು, ಆರೋಗ್ಯ ಯೋಜನೆ ಜಾರಿ, ಹೈದರಾಬಾದ್-ಕರ್ನಾಟಕ ಭಾಗದ ನೌಕರರಿಗೆ ಮುಂಬಡ್ತಿಗಾಗಿ 371-ಜಿ ವಿಶೇಷ ಸ್ಥಾನಮಾನ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುವೆ ಎಂದು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಟೀಕೆಗಳಿಗೆ ಉತ್ತರ ಕೊಡಲಿಲ್ಲ. ಕಳೆದ ಮೂರು ತಿಂಗಳಲ್ಲಿ ಯಾವುದೇ ಪಕ್ಷದ ಜನಪ್ರತಿನಿಧಿಗಳನ್ನು ಭೇಟಿ ಮಾಡದೆ ನೌಕರರ ಆಶೋತ್ತರಗಳ ಬಗ್ಗೆಯಷ್ಟೇ ಚರ್ಚೆ ಮಾಡಿದೆ. ಚುನಾವಣೆಯಲ್ಲಿ ಹಣದ ಆಮಿಷಕ್ಕೆ ಒಳಗಾಗದೆ ನನ್ನ ಕೈ ಹಿಡಿದಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸತ್ಯ ನಿಷ್ಠೆ ಕಾಯಕಕ್ಕೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ. ಕಳೆದ ಹತ್ತು ವರ್ಷಗಳಿಂದ ಶಿವಮೊಗ್ಗ ಜಿಲ್ಲೆ ಸರ್ಕಾರಿ ನೌಕರ ಸಂಘದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. 2019ರಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಸ್ಪರ್ಧೆ ಮಾಡಿ 57 ಮತಗಳ ಅಂತರದಿಂದ ಆಯ್ಕೆಯಾಗಿದ್ದೆ. ಐದು ವರ್ಷಗಳ ಅವಧಿಯಲ್ಲಿ ನೌಕರ ಪರವಾದ ಹಲವಾರು ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ರೂಪಿಸಿದ್ದೇನೆ. ಅದರ ಪರಿಣಾಮವಾಗಿ ಈ ಬಾರಿ 67 ಮತಗಳ ಅಂತರದಿಂದ ಗೆಲುವು ಸಿಕ್ಕಿದೆ ಎಂದರು.

ಇದೇ ವೇಳೆ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು. ನೌಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್, ಜಿಲ್ಲಾ ಸಂಘದ ಗೌರವಾಧ್ಯಕ್ಷ ಡಾ. ಸಿ.ಎ.ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಭದ್ರಾವತಿ ತಾಲೂಕು ನೌಕರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಡಿಸಿ ಬಳಿ ಉತ್ತರ ಸಿಗಬಹುದು!

ನನ್ನ ಮನೆ ದುರಸ್ತಿ ವೆಚ್ಚದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನಿಮ್ಮ ಪ್ರಶ್ನೆಗೆ ಜಿಲ್ಲಾಧಿಕಾರಿಗಳ ಬಳಿ ಉತ್ತರ ಸಿಗಬಹುದು ಎಂದು ಷಡಾಕ್ಷರಿ ಹೇಳಿದರು.