ಚಿಕ್ಕಮಗಳೂರು: ಗೌರವ ಧನದ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಕೂಡಲೇ ೭ನೇ ವೇತನ ಆಯೋಗದ ಶಿಫಾರಸ್ಸಿನ ಶೇ.೫೦ ರಷ್ಟು ವೇತನ ನೀಡಬೇಕು ಎಂದು ಜಿಲ್ಲಾ ಬಿಸಿಯೂಟ ಕಾರ್ಯಕರ್ತರು ಹಾಗೂ ಗ್ರಾಪಂ ನೌಕರರು ಮತ್ತು ಇತರೆ ಅರೆಸರ್ಕಾರಿ ನೌಕರರ ಕ್ರಿಯಾ ಸಮಿತಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯಕುಮಾರ್ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಳಹಂತದ ನೌಕರರಿಗೆ ಕೆಲಸಕ್ಕೆ ತಕ್ಕ ಪಿಎಫ್, ಇಎಸ್‌ಐ, ವೈದ್ಯಕೀಯ ಸೌಲಭ್ಯ, ರಜೆ, ನಿವೃತ್ತಿ ಉಪಧನ, ನಿವೃತ್ತಿ ವೇತನಗಳನ್ನು ಕಡ್ಡಾಯಗೊಳಿಸುವ ಜೊತೆಗೆ ವೇತನ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಎಲ್ಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ ೧,೨೦ ಲಕ್ಷ ಬಿಸಿಯೂಟ ಮಹಿಳೆಯರಿಗೆ ಸುಮಾರು ೬೫ ಸಾವಿರ ಅಂಗನವಾಡಿ ಮಹಿಳೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ರಾಜ್ಯದ ಸುಮಾರು ೬೩೦೦ ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಮತ್ತು ರಾಜ್ಯಾದ್ಯಂತ ಕಂದಾಯ ಇಲಾಖೆಯ ಸೇವೆಯಲ್ಲಿ ತೊಡಗಿರುವ ಗ್ರಾಮ ಸಹಾಯಕರುಗಳಿಗೆ ತಮ್ಮ ಕೆಲಸಕ್ಕೆ ತಕ್ಕ ಸಂಬಳ ನೀಡುವಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳು ಸಹ ವಿಫಲವಾಗಿವೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಸುಮಾರು ೧೨.೨೦ ಲಕ್ಷದಷ್ಟು ಇರುವ ನೌಕರರಿಗೆ ಕೆಲವು ಆಯೋಗಗಳ ಶಿಫಾರಸಿನ ಮೇಲೆ ಪರಿಷ್ಕೃತ ವೇತನ ಜಾರಿ ಮಾಡಿರುವ ಸರ್ಕಾರವೇ ಹೇಳುವಂತೆ ವರ್ಷಕ್ಕೆ ಸುಮಾರು ೨೦೨೦೭ ಕೋಟಿಗಳಷ್ಟು ಹೆಚ್ಚುವರಿ ವೇತನ ನೀಡಲಿದೆ. ಆದರೆ ಸರ್ಕಾರದ ಅಧೀನದಲ್ಲಿ ಕೆಲಸ ನಿರ್ವಹಿಸುವ ಬಿಸಿಯೂಟ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇವಲ ರೂ.೩೭೦೦ ನೀಡುತ್ತಿದ್ದು, ಇವರಿಗೆ ಅಪಘಾತ, ಅನಾಹುತಗಳಾದಲ್ಲಿ ಯಾವುದೇ ಪರಿಹಾರ ಇರುವುದಿಲ್ಲ. ದಿನಾಂಕ: ೧೬-೦೭-೨೦೨೪ ರಂದು ಸರ್ಕಾರಿ ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ೪೦ ಸಾವಿರ ರೂ. ಹಾಗೂ ೩೦ ಸಾವಿರ ರೂ. ಉಪಧನ ನೀಡಲು ಆದೇಶ ಹೊರಡಿಸಿದೆ ಎಂದರು.
ಆದರೆ ಈ ಹಿಂದೆ ಕೆಲಸ ಮಾಡಿ ನಿವೃತ್ತಿಗೊಂಡಿರುವ ಕಾರ್ಯಕರ್ತೆಯರು ಮತ್ತು ಮಕ್ಕಳ ಸಂಖ್ಯೆ ಕೊರತೆಯಿಂದ ಕೈಬಿಡಲಾಗಿರುವ ಹತ್ತಾರು ವರ್ಷಗಳ ಸೇವೆ ಸಲ್ಲಿಸಿದ ಕಾರ್ಯಕರ್ತೆರಿಗೆ ಈ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ. ವೈದ್ಯಕೀಯ ಹಾಗೂ ನಿವೃತ್ತಿ ವೇತನ, ಪಿಎಫ್, ಇಎಸ್‌ಐಗಳಾದಂತಹ ಯಾವುದೇ ಸೌಲಭ್ಯವಿರುವುದಿಲ್ಲ. ಅದೇ ರೀತಿಯಲ್ಲಿ ಗ್ರಾಮ ಪಂಚಾಯಿತಿ ನೌಕರರು ಗ್ರಾಮದ ಏಳಿಗೆಗಾಗಿ ಹಗಲು ಇರುಳು ದುಡಿಯುತ್ತಿದ್ದರೂ ಇವರಲ್ಲಿ ಬಹುತೇಕರಿಗೆ ಜಿಲ್ಲಾ ಪಂಚಾಯಿತಿಯಿAದ ಅನುಮೋದನೆ ಆಗದೆ ನಿವೃತ್ತಿ ಮತ್ತು ಸಾವು ನೋವುಗಳು ಆದಲ್ಲಿ ಯಾವುದೇ ಸೌಲಭ್ಯವಿರುವುದಿಲ್ಲ ಎಂದು ತಿಳಿಸಿದರು.
ಅನುಮೋದನೆಗೊಂಡ ನೌಕರರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಒತ್ತಡದಿಂದ ಏಕಾಏಕಿ ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಬಡ್ತಿ ಮತ್ತು ಅನುಕಂಪದ ಆಧಾರದ ಮೇಲಿನ ನೇಮಕಾತಿ ನಡೆಸದೆ ವಿಳಂಭಗೊಳಿಸಿ ಇರುವ ನೌಕರರಿಗೆ ಹೆಚ್ಚಿನ ಹೊರೆ ಹೊರಿಸಲಾಗುತ್ತಿದೆ ಎಂದು ದೂರಿದರು.
ಮಕ್ಕಳ ಆರೈಕೆ, ಗರ್ಭಿಣಿಯರ ಆರೈಕೆ ಹಾಗೂ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಹಾಗೂ ತಮ್ಮ ಜೀವವನ್ನು ಲೆಕ್ಕಿಸದೆ ಗ್ರಾಮದ ಗ್ರಾಮಸ್ಥರ ಬಳಿ ಹೋಗಿ ಮಾಹಿತಿ ಪಡೆದು ಆರೈಕೆ ಮಾಡುವ ಕೋವಿಡ್ ಇತರೆ ಸಂದರ್ಭದಲ್ಲಿ ಆರೋಗ್ಯ ಇಲಾಖೆಗಳೊಂದಿಗೆ ಹೆಚ್ಚಿನ ಶ್ರಮ ಹಾಕಿದ ಆಶಾ ಕಾರ್ಯಕರ್ತೆಯರು ಮತ್ತು ರಾಜ್ಯದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಇಲಾಖೆಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಯಾವುದೇ ಸರ್ಕಾರಿ ಸೌಲಭ್ಯ ದೊರೆತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಜಿ.ರಘು, ಪ್ರಮುಖರಾದ ಪುಷ್ಪಾವತಿ, ಇಂದುಮತಿ, ಸಬೀಮ್‌ಭಾನು, ರಾಜೇಗೌಡ ಇದ್ದರು.