ನವದೆಹಲಿ: ಕೋವಿಡ್ ಲಸಿಕೆ ಅಭಿಯಾನ ಪ್ರಗತಿ ಪಥದಲ್ಲಿರುವಂತೆಯೇ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೇಡಿಕೆ ಕೋವಿಡ್ ಪೂರ್ವದ ಸ್ಥಿತಿಗೆ ಮತ್ತೆ ತಲುಪಿವೆ. ಆದರೆ ಕಚ್ಚಾ ತೈಲ ಉತ್ಪಾದನೆ ಮೇಲೆ ಮಿತಿ ಹೇರಿರುವ ಕಾರಣ ದರ ಏರುತ್ತಲೇ ಇದ್ದು, ಜಾಗತಿಕವಾಗಿ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈ ನಡುವೆ, ಇಂದು ನಡೆಯುವ ಒಪೆಕ್ (ಆರ್ಗನೈಸೇಷನ್ ಆಫ್ ದ ಪೆಟ್ರೋಲಿಯಂ ಎಕ್ಸ್ಪೋರ್ಟಿಂಗ್ ಕಂಟ್ರೀಸ್)ನ ಮಹತ್ವದ ಸಭೆಯ ಮೇಲೆ ಜಗತ್ತಿನ ಗಮನ ಕೇಂದ್ರೀಕೃತವಾಗಿದೆ.
ತೈಲ ದರವನ್ನು ಒಪೆಕ್ ರಾಷ್ಟ್ರಗಳು ನಿಯಂತ್ರಿಸುತ್ತಿದ್ದು, ಅವುಗಳ ಬೆಂಬಲವಿಲ್ಲದೇ ಬೆಲೆ ನಿಯಂತ್ರಣ ಕಷ್ಟ. ಇತಿಹಾಸದಲ್ಲಿ ಮೊದಲ ಸಲ ಕಳೆದ ವರ್ಷ ಆಯಿಲ್ ಫ್ಯೂಚರ್ಸ್ ಶೂನ್ಯಕ್ಕೂ ಕೆಳಗೆ ಇಳಿದು ವಹಿವಾಟು ನಡೆಸಿತ್ತು. ಇಂದು ಸಭೆ ಇರುವ ಕಾರಣ ಜಗತ್ತಿನ ಗಮನ ಸೌದಿ ಅರೇಬಿಯಾ ಮತ್ತು ರಷ್ಯಾ ಮೇಲೆ ಕೇಂದ್ರೀಕೃತವಾಗಿದೆ.
ಪ್ರಸ್ತುತ ತೈಲ ಬೆಲೆ: ಕಳೆದ ಮೂರು ದಿನಗಳ ಅವಧಿಯಲ್ಲಿ ಬ್ರೆಂಟ್ ಮತ್ತು ಕಚ್ಚಾ ತೈಲ ದರ ಇಳಿಕೆ ಕಂಡಿದ್ದು, ಬುಧವಾರ ಕೊಂಚ ಏರಿಕೆ ತೋರಿದೆ. ಬ್ರೆಂಟ್ ತೈಲ ದರ 62.89 ಡಾಲರ್ ಆಗಿದ್ದು, ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ಶೇಕಡ 21 ಹೆಚ್ಚಳವಾಗಿದೆ. ಇದೇ ರೀತಿ ಕಚ್ಚಾ ತೈಲ ಕೂಡ ಶೇಕಡ 23 ಏರಿಕೆ ತೋರಿದೆ.
ತೈಲ ಪೂರೈಕೆ ಹೆಚ್ಚಳವಾದೀತೇ?
ಒಪೆಕ್ ರಾಷ್ಟ್ರಗಳು ಇಂದು ಸಭೆ ನಡೆಸಿ ಜಾಗತಿಕವಾಗಿ ತೈಲ ಬೇಡಿಕೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆಸಲಿವೆ. ಬೇಡಿಕೆ ಪೂರೈಸುವುದಕ್ಕೆ ಉತ್ಪಾದನೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುವ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ರಷ್ಯಾಗಳು ಉತ್ಪಾದನೆ ಹೆಚ್ಚಿಸುವ ಘೋಷಣೆ ಮಾಡಬಹುದೇ ಎಂಬ ನಿರೀಕ್ಷೆ ಎಲ್ಲ ದೇಶಗಳಲ್ಲೂ ಇದೆ. ಹೀಗಾದರೆ 15 ಲಕ್ಷ ಬ್ಯಾರೆಲ್ ತೈಲ ಮಾರುಕಟ್ಟೆ ಬರಲಿದೆ.
ಸಭೆಯ ಅಜೆಂಡಾ
ಮುಂದಿನ ತಿಂಗಳಿಂದ ನಿತ್ಯದ ಒಟ್ಟು ಉತ್ಪಾದನೆಯನ್ನು 5 ಲಕ್ಷ ಬ್ಯಾರೆಲ್ಗೆ ಹೆಚ್ಚಿಸುವುದು ಬೇಕೇ ಅಥವಾ ಬೇಡವೇ?
ನಿತ್ಯ ಉತ್ಪಾದನೆಯನ್ನು 1 ಲಕ್ಷ ಬ್ಯಾರೆಲ್ ತಗ್ಗಿಸಿರುವ ತೀರ್ವನವನ್ನು ಸೌದಿ ಅರೇಬಿಯಾ ಮರುಪರಿಶೀಲಿಸಲಿದೆ
ತೈಲ ದರ ಏರಿಕೆಗೇನು ಕಾರಣ?
ಕರೊನಾ ಸಂಕಷ್ಟ ಮತ್ತು ಈಗ ಲಸಿಕೆ ಅಭಿಯಾನದ ನೇರ ಪ್ರಭಾವ
ಅರ್ಥ ವ್ಯವಸ್ಥೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಆರ್ಥಿಕ ಚಟುವಟಿಕೆ ಹೆಚ್ಚಾಗಿದೆ. ತೈಲ ಬೇಡಿಕೆಯಲ್ಲೂ ಹೆಚ್ಚಳವಾಗಿದೆ.
ಬೇಡಿಕೆಗೆ ತಕ್ಕಂತೆ ತೈಲ ಉತ್ಪಾದನೆ ಮತ್ತು ಪೂರೈಕೆ ಇಲ್ಲ
ಸುಂಕ ಇಳಿಸಿದ್ರೂ ಸರ್ಕಾರಕ್ಕಿಲ್ಲ ನಷ್ಟ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 8.5 ರೂ. ಇಳಿಕೆ ಮಾಡಿದರೂ ಕೇಂದ್ರ ಸರ್ಕಾರದ ಆದಾಯಕ್ಕೆ ಕೊರತೆ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಾಖಲೆ ಏರಿಕೆ ಕಾಣುತ್ತಿರುವ ತೈಲ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ ಸುಂಕ ಇಳಿಕೆ ಮಾಡಬೇಕು ಎಂಬ ಆಗ್ರಹ ದೇಶಾದ್ಯಂತ ಕೇಳಿಬರುತ್ತಿರುವ ಬೆನ್ನಲ್ಲೇ, ತಜ್ಞರ ವರದಿ ಬಿಡುಗಡೆಗೊಂಡಿದೆ. ಪ್ರಸಕ್ತ ವರ್ಷದ ಬಜೆಟ್ನಲ್ಲಿ ತೈಲ ಮೇಲಿನ ತೆರಿಗೆ, ಸುಂಕದಿಂದ 3.2 ಲಕ್ಷ ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ. ಆದರೆ ಈಗ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ 4.35 ಲಕ್ಷ ತೆರಿಗೆ ಸಂಗ್ರಹ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ 8.5 ರೂ. ಸುಂಕ ಇಳಿಕೆ ಮಾಡಿದರೂ ಬಜೆಟ್ನಲ್ಲಿ ಉಲ್ಲೇಖಿಸಿರುವ ಆದಾಯದ ಗುರಿಯನ್ನು ಸುಲಭವಾಗಿ ತಲುಪಬಹುದು ಎಂದು ಐಸಿಐಸಿಐ ಸೆಲ್ಯುರಿಟೀಸ್ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ತೈಲ ಬೆಲೆ ಇಳಿಕೆಯಿಂದ ಬೇಡಿಕೆ ಹೆಚ್ಚಲಿದೆ. ಕರೊನಾ ಬಳಿಕ ಮಂದಗತಿಯಲ್ಲಿರುವ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಹಣದುಬ್ಬರ ನಿಯಂತ್ರಣಕ್ಕೂ ಈ ಕ್ರಮದಿಂದ ಸಹಾಯವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.