ಮಡಿಕೇರಿ: ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ಸವಾಲಾಗಿರುವ ಅಪೌಷ್ಠಿಕತೆ ಸಮಸ್ಯೆ ಹೋಗಲಾಡಿಸುವಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ ಎಂದು ಚೆಟ್ಟಳ್ಳಿಯ ತೋಟಗಾರಿಕಾ ವಿಜ್ಞಾನಿ ಮಧು ಹೇಳಿದರು.
ವಾಲ್ನೂರು ಸಮೀಪದ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕೇಂದ್ರೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಚೆಟ್ಟಳಿ ವತಿಯಂದ ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಸುಸ್ಥಿರ ಬೆಳೆ ಉತ್ಪಾದನೆ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಮತ್ತು ಸಂಪನ್ಮೂಲ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರಿಗೂ ಹಣ್ಣುಗಳ ಅವಶ್ಯಕತೆಯಿದೆ. ಇದರಿಂದ ಅಪೌಷ್ಠಿಕತೆಯನ್ನು ಹೋಗಲಾಡಿಬಹುದು ಎಂದ ಅವರು, ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ಸವಾಲಾಗಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಹಣ್ಣುಗಳ ಪಾತ್ರ ಬಹುಮುಖ್ಯ ಎಂದು ಹೇಳಿದರು.
ಜಿಲ್ಲೆಯಪರಿಶಿಷ್ಟ ಪಂಗಡದವರನ್ನು ಗುರುತಿಸಿ ವಿವಿಧ ತರಬೇತಿಗಳೊಂದಿಗೆ ಸಾಮರ್ಥ್ಯ ಬಲವರ್ಧನೆ ಮಾಡುವುದು. ಸಂಪನ್ಮೂಲಗಳನ್ನು ವಿತರಿಸಿ ಅವರ ಆದಾಯ ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿವಿಧಹಣ್ಣುಗಳ ಮಹತ್ವದ ಬಗ್ಗೆ ತಿಳಿಸಿದ ಚೆಟ್ಟಳ್ಳಿ ಕೇಂದ್ರದ ಮುಖ್ಯಸ್ಥ ಡಾ.ರಾಜೇಂದಿರನ್, ಹಣ್ಣಿನ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಪಡೆದುಕೊಳ್ಳಬಹುದು ಎಂದರು. ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ.ರಾಣಿ ಪ್ರಮುಖ ಕೀಟಗಳ ಬಗ್ಗೆ ಹಾಗೂ ಅದರ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ೧೦ ಬಗೆಯ ೩೦ ಹಣ್ಣಿನ ಗಿಡಗಳು ಹಾಗೂ ೨ ಕೆ.ಜಿ. ಟ್ರೈಕೋಡೆರ್ಮಾವನ್ನು ವಿತರಿಸಲಾಯಿತು.
ವಾಲ್ನೂರು, ತ್ಯಾಗತ್ತೂರು, ಬಾಳೆಗುಂಡಿ, ಮೀನುಕೊಲ್ಲಿ, ಹೊಸಪಟ್ಟಣ, ಮಾವಿನಹಳ್ಳ, ಕಟ್ಟೆಹಾಡಿ, ಕಬ್ಬಿನಗದ್ದೆ, ದೊಡ್ಡಬೆಟ್ಟಗೇರಿ, ಯಡವನಾಡು, ಸಜ್ಜಾಲಿ ಹಾಡಿಗಳಿಂದ ೧೦೦ಕ್ಕೂ ಹೆಚ್ಚು ಗಿರಿಜನ ಫಲಾನುಭವಿಗಳು ಆಗಮಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ಸಿಬ್ಬಂದಿ ಸುನಿತಾ, ವಾಲ್ನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್, ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ಸಿಬ್ಬಂದಿ, ವಾಲ್ನೂರು ಗ್ರಾಮ ಪಂಚಾಯಿತಿ ಸದಸ್ಯರು ಭಾಗಿಯಾಗಿದ್ದರು.