ನ್ಯೂಸ್

ಅಭ್ಯಾಸದ ಫಲ

ಉತ್ತಮ ಫಲ ಪಡೆಯಲು ಮರ ಗಿಡಗಳ ಮೂಲಕ್ಕೆ ಗೊಬ್ಬರ ನೀರುಗಳನ್ನು ಹಾಕಬೇಕು. ನಿರಂತರ ಅದರ ಯೋಗಕ್ಷೇಮವನ್ನು ಗಮನಿಸಬೇಕು. ಅದಿಲ್ಲದಿದ್ದರೆ ನಿರೀಕ್ಷೆ ಹುಸಿಯಾಗುತ್ತದೆ. ಅಂತೆಯೇ ತಜ್ಞತೆಯೆಂಬುದು ಒಮ್ಮೆಲೇ ಬರುವುದಿಲ್ಲ. ಪ್ರಯತ್ನ ಶೀಲನಾದರೆ ಮೂರ್ಖನೂ ಮಾತನಾಡಬಲ್ಲ, ಕುಂಟನೂ ಪರ್ವತವನ್ನೇರಬಲ್ಲ, ಅಜ್ಞನೂ ತಜ್ಞನಾಗಬಲ್ಲ. ಇದನ್ನು ನಾವು ಅರ್ಥೈಸಿಕೊಂಡು, ಮನದಟ್ಟುಮಾಡಿಕೊಂಡು ಬದುಕಿನಲ್ಲಿ ಮುಂದುವರಿಯಬೇಕು. ಕವಿ ಡಿವಿಜಿ ಹೇಳುತ್ತಾರೆ:

ಏಸು ಸಲ ತಪವಗೈದೇಸು ಬನ್ನವನಾಂತು| ಕೌಶಿಕಂ ಬ್ರರ್ಹ¾ಪದಕರ್ಹನಾದನ್?| ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ| ಲೇಸಾಗಿಸಾತ್ಮವನು - ಮಂಕುತಿಮ್ಮ||

ಕೌಶಿಕ ಬ್ರರ್ಹ¾ಯಾಗಲು ಪಟ್ಟ ಕಷ್ಟಗಳೆಷ್ಟು? ಅವನು ಬಿದ್ದದ್ದೆಷ್ಟು? ಆದರೆ ಅವನು ಬ್ರರ್ಹ¾ಯಾದ. ಕಾರಣ ನಿರಂತರ ಅಭ್ಯಾಸದಿಂದಾಗಿ. ನಮಗೆ ಮಾತ್ರ ಅವನು ಬಿದ್ದಿ್ದ್ದೇ ನೆನಪಿರುತ್ತದೆ. ಮಂಕುತಿಮ್ಮನ ಕಗ್ಗದ ಇನ್ನೊಂದು ಕಗ್ಗದಲ್ಲಿ ಡಿವಿಜಿ ಹೇಳುವುದು ಹೀಗೆ: ಒಂದು ಮಗು ನಡೆಯಲು ಕಲಿಯುವಾಗ ಅನೇಕಬಾರಿ ಬೀಳುತ್ತದೆ, ಎಷ್ಟೆಷ್ಟೋ ಗಾಯ ಮಾಡಿಕೊಳ್ಳುತ್ತದೆ. ಹಾಗೆಂದು ಅದು ಎಂದೂ ನಡೆಯುವುದನ್ನು ನಿಲ್ಲಿಸುವುದಿಲ್ಲ. ಅಭ್ಯಾಸ ನಿರಂತರವಾಗಿದ್ದುದರಿಂದಲೇ ನಾವೆಲ್ಲ ಎರಡೂ ಕಾಲುಗಳಿಂದ ನಡೆಯುತ್ತಿದ್ದೇವೆ.

ಒಮ್ಮೆ ವಿದುಷಿ ಎಂ.ಎಸ್. ಸುಬ್ಬಲಕ್ಷ್ಮೀ ಅವರಿಗೆ ಒಬ್ಬ ಸಂದರ್ಶನಕಾರ ಕೇಳಿದ. ‘ಇಷ್ಟು ಸುಂದರವಾಗಿ ಹಾಡುತ್ತೀರಿ, ಎಷ್ಟು ಅಭ್ಯಾಸ ಮಾಡುತ್ತೀರಿ?’ ಎಂದು. ಅದಕ್ಕೆ ಆ ಸಂಗೀತ ಸಾಮ್ರಾಜ್ಞಿ ‘ನಾನು ಒಂದು ದಿನ ಅಭ್ಯಾಸ ಮಾಡದೇ ಹೋದರೆ ಕಛೇರಿ ಕೊಡುವಾಗ ನಾನು ಎಲ್ಲಿ ತಪ್ಪಿದ್ದೇನೆ ಎಂದು ನನಗೆ ಮಾತ್ರ ಗೊತ್ತಾಗುತ್ತದೆ.

ಎರಡು ದಿನ ಹಾಗೇ ಹೋದರೆ ಸಹಾಯಕರು, ಪಕ್ಕವಾದ್ಯದವರು ನಾನೆಲ್ಲಿ ತಪ್ಪುತ್ತಿದ್ದೇನೆ ಎಂದು ಹೇಳುತ್ತಾರೆ. ನಾನು ಸತತವಾಗಿ ಮೂರುದಿನ ಅಭ್ಯಾಸ ಮಾಡದೇ ಹೋದರೆ ಕುಳಿತ ಜನರು ನನ್ನತಪ್ಪನ್ನು ತೋರಿಸುತ್ತಾರೆ. ಆದರೆ ನನ್ನ ಜೀವನದಲ್ಲಿ ಅಂತಹ ಒಂದು ದಿನವೂ ಬಂದಿಲ್ಲ’ ಎಂದರು. ಹಾಗಾದರೆ ಎಷ್ಟು ಅಭ್ಯಾಸ ಮಾಡಿರಬೇಕು! ಆದ್ದರಿಂದ ಸುಭಾಷಿತಕಾರರು ಅಭ್ಯಾಸದ ಫಲವನ್ನು ಒತ್ತಿ ಹೇಳಿದ್ದಾರೆ.