ನ್ಯೂಸ್

13ರಿಂದ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ; ಕೋಲಾರದಲ್ಲಿ 3ದಿನ ಮೇಳ ಆಯೋಜನೆ

ಕೋಲಾರ:  ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಜ.13ರಿಂದ 15ರ ವರೆಗೆ ಜಿಲ್ಲಾ ನ್ಯಾಯಾಲಯ ಬಳಿ ಇರುವ ತೋಟಗಾರಿಕೆ ನರ್ಸರಿಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಳವನ್ನು ಜಿಲ್ಲಾಡಳಿತ, ಜಿಪಂ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದೆ. ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜ.13ರಂದು ಸಂಜೆ 4 ಕ್ಕೆ ಉದ್ಘಾಟಿಸಲಿದ್ದಾರೆ. ಸಂಸದ ಎಸ್​.ಮುನಿಸ್ವಾಮಿ ಜಿಲ್ಲೆಯ ಪ್ರಗತಿಪರ ರೈತರಿಗೆ ರೈತ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು. ಫಲಪುಷ್ಪ ಪ್ರದರ್ಶನ:  ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದು, ಹೂವಿನಿಂದ ವಿವಿಧ ಕಲಾಕೃತಿ ರಚಿಸಲಾಗುವುದು. ಕುರುಡುಮಲೆ ಗಣೇಶ, ಜಿರಾಫೆ ಹಾಗೂ ಇತರ ಕಲಾಕೃತಿಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ. ತರಕಾರಿ ಕೆತ್ತನೆ, ತೆಂಗಿನ ಗರಿಗಳಿಂದ ನಿರ್ಮಿತವಾದ ಮನೆ, ವಿವಿಧ ಪ್ರಬೇಧದ ಹೂವು, ಔಷಧ ಸಸ್ಯಗಳ ಬಗ್ಗೆ ಮಾಹಿತಿ ಇರಲಿದೆ. ಅಲ್ಲದೇ, ಹೊರಾಂಗಾಣ, ಒಳಾಂಗಣ ಉದ್ಯಾನ, ಕೈತೋಟದ ಬಗ್ಗೆಯೂ ಅರಿವು ಮೂಡಿಸಲಾಗುವುದು. ವೈವಿಧ್ಯಮಯ ಹೂಕುಂಡಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಈ ಸಂದರ್ಭದಲ್ಲಿ ಸಾಂಸತಿಕ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ. ರಂಗೋಲಿ ಸ್ಪರ್ಧೆ, ಸಿರಿಧಾನ್ಯಗಳಲ್ಲಿ ವಿವಿಧ ತಿಂಡಿ ತಿನಿಸು ತಯಾರಿಸುವ ಸ್ಪರ್ಧೆ ಹಾಗೂ ಮಾರಾಟ ಇರಲಿದೆ ಎಂದು ವೆಂಕಟ್​ರಾಜಾ ವಿವರಿಸಿದರು. ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ: ಇನ್ನು ಕೃಷಿ ಸಂಬಂಧಿಸಿದ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯೂ ಇರಲಿದೆ. ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಗುವುದು. 30 ವಸ್ತುಪ್ರದರ್ಶನ ಮಳಿಗೆಗಳು ಇರಲಿವೆ. ಹೀಗಾಗಿ, ರೈತರು, ವಿದ್ಯಾರ್ಥಿಗಳು ಸೇರಿ ಎಲ್ಲ ಸಾರ್ವಜನಿಕರು ಮೇಳದಲ್ಲಿ ಭಾಗವಹಿಸಬೇಕು. ಯಶಸ್ವಿ ಸಿನಿಮಾ ಕಾಂತಾರ ಥೀಮ್​ನೊಂದಿಗೆ ಮೇಳದಲ್ಲಿ ಮರಳು ಕಲಾಕೃತಿ ಪ್ರದರ್ಶಿಸಲಾಗುವುದು. ಇದರೊಂದಿಗೆ ದೈವಾರಾಧನೆ, ಪುನೀತ್​ ರಾಜ್​ಕುಮಾರ್​ ಅವರ ಕಲಾಕೃತಿಯೂ ಇರಲಿದೆ. ಜ.10ರಂದು ಬೆಳಗ್ಗೆ 6 ಗಂಟೆಗೆ ಜಿಲ್ಲಾಮಟ್ಟದ ಸಿರಿಧಾನ್ಯ ಜಾಗೃತಿ ನಡಿಗೆಯನ್ನು ಪೊಲೀಸ್​ ಪರೇಡ್​ ಮೈದಾನದಿಂದ ಪ್ರವಾಸಿ ಮಂದಿರದವರೆಗೆ ನಡೆಸಲಾಗುವುದು. ಮೊದಲು ನೋಂದಣಿ ಮಾಡಿಕೊಂಡ 300 ಜನರಿಗೆ ಟಿ-ಶರ್ಟ್​ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು. ಸಿರಿಧಾನ್ಯ ಕುರಿತು ಜಾಗೃತಿ: ಇತ್ತೀಚಿನ ದಿನಗಳಲ್ಲಿ ಜನರು ಅಸಹಜ ಜೀವನಶೈಲಿ ಅಳವಡಿಸಿಕೊಂಡಿದ್ದು, ಪೌಷ್ಟಿಕಾಂಶ ಮತ್ತು ಅಲ್ಪನಾರು ಅಂಶವಿರುವ ಆಹಾರ ಸೇವಿಸುತ್ತಿದ್ದಾರೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪಾರಂಪರಿಕ ಬೆಳೆಗಳಾದ ಸಿರಿಧಾನ್ಯಗಳನ್ನು ಕಡಿಮೆ ಫಲವತ್ತತೆ ಹಾಗೂ ಕಡಿಮೆ ಮಳೆಯಲ್ಲಿಯೂ ಸಹ ಬೆಳೆಯಬಹುದಾಗಿದ್ದು, ಇವು ಪೌಷ್ಟಿಕಾಂಶಗಳ ಆಗರವಾಗಿವೆ. ಇವನ್ನು ಸೇವಿಸಲು ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಅಷ್ಟೇ ಅಲ್ಲದೆ ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು  ಮುಂದಾಗಬೇಕಿದೆ. ನಿತ್ಯದ ಆಹಾರದಲ್ಲಿ ಸಿರಿಧಾನ್ಯ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಈ ಮೇಳ ಆಯೋಜಿಸಲಾಗಿದೆ ಎಂದರು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಲು ಸಿರಿಧಾನ್ಯ ಸೇವನೆ ಅಗತ್ಯವಿದೆ. ರಾಗಿ, ಸಾಮೆ, ಬರಗು, ನವಣೆ, ಹಾರಕ, ಊದಲು ಸೇರಿದಂತೆ ಸಿರಿಧಾನ್ಯದಲ್ಲಿ ಪೋಷಕಾಂಶವಿದ್ದು, ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು, ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಹಲವು ರೋಗಗಳನ್ನು ದೂರವಿಡುತ್ತದೆ ಎಂದು ವೆಂಕಟ್​ರಾಜಾ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್​ ಕುಮಾರ್​, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ, ಕೃಷಿ ಜಂಟಿ ನಿರ್ದೇಶಕಿ ರೂಪಾದೇವಿ ಇದ್ದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ರ್ನಿಲಕ್ಷ್ಯಕ್ಕೆ ಒಳಗಾಗಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಈ ಸಂಬಂಧ ಸದ್ಯದಲ್ಲೇ ಕಾಫಿ ಟೇಬಲ್​ ಬುಕ್​ ಮಾಡಿಸಲಿದ್ದೇವೆ. ಜತೆಗೆ ಪ್ರವಾಸಿ ತಾಣಗಳ ಕುರಿತು ಹೋರ್ಡಿಂಗ್ಸ್​ ಹಾಕಲಿದ್ದೇವೆ. ನಗರ ಬಸ್​ ವ್ಯವಸ್ಥೆ ಪುನರಾರಂಭಿಸಲು ಪ್ರಸ್ತಾಪ ಕಳುಹಿಸಿದ್ದೇವೆ. ನಗರದಿಂದ ಜಿಲ್ಲಾಡಳಿತ ಭವನ ಸೇರಿ ವಿವಿಧೆಡೆ ಷಟಲ್​ ಬಸ್​ ಸೇವೆ ಕಲ್ಪಿಸುವ ಯೋಜನೆ ಇದೆ. | ವೆಂಕಟ್​ರಾಜಾ, ಜಿಲ್ಲಾಧಿಕಾರಿ, ಕೋಲಾರ

11.42 ಕೋಟಿ ಪರಿಹಾರ:  ಕೋಲಾರಮ್ಮ ಕೆರೆ ರಸ್ತೆ ದುರಸ್ತಿ ಆಗಬೇಕು. ನಗರದಲ್ಲಿನ ರಸ್ತೆಗಳ ದುರಸ್ತಿ ಸಂಬಂಧ ನಗರೋತ್ಥಾನದಡಿ ಟೆಂಡರ್​ ಆಗಿದ್ದು, ಕೆಲಸ ಆರಂಭವಾಗಲಿದೆ. ಹಾಗೆಯೇ, ಯರಗೋಳ್​ ಜಲಾಶಯದ ಪೈಪ್​ಲೈನ್​ ಅಳವಡಿಕೆ ಬಂಗಾರಪೇಟೆ, ಕೋಲಾರ, ಮಾಲೂರು ನಗರಗಳ ತನಕ ಆಗಿದ್ದು, ನಗರ ಪ್ರದೇಶದಲ್ಲಿ ಪೈಪ್​ಲೈನ್​ ಹಾಕಲಾಗುತ್ತಿದೆ. ಕೆ.ಸಿ.ವ್ಯಾಲಿ ನೀರು ಯರಗೋಳ್​ ಜಲಾಶಯಕ್ಕೆ ಈಗ ಹೋಗುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರ ಸೇರಿ 8,432 ಹೆಕ್ಟೇರ್​ ಬೆಳೆ ನಾಶವಾಗಿದೆ. 11.42 ಕೋಟಿ ಪರಿಹಾರ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ಹೇಳಿದರು.