ನ್ಯೂಸ್

ಮೀನು ಮಾರಾಟ ಫೆಡರೇಷನ್‌ಗೆ ವಂಚನೆ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ.ಗೆ ವಂಚಿಸಿದ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ಪಾಲಿಸದ ಮಂಜುನಾಥ ಖಾರ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.


ಈತ ಫೆಡರೇಷನ್‌ನಿಂದ ಮೀನು ಖರೀದಿಸಿದ್ದ. ಅದರ ಹಣವನ್ನು ಪಾವತಿಸಿರಲಿಲ್ಲ. ಅಲ್ಲದೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿಯಿರಿಸಿದ್ದ. ಆತ ನೀಡಿದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಮೂರು ಪ್ರಕರಣಗಳು ದಾಖಲಾಗಿದ್ದವು. ಒಟ್ಟು 88 ಲ.ರೂ. ಪಾವತಿಸುವಂತೆ ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿತ್ತು. ಆದರೆ ಆರೋಪಿ ಹಣ ಮರುಪಾವತಿ ಮಾಡಲು ವಿಲನಾದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿತ್ತು. ಆರೋಪಿಯನ್ನು ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ ಸೆ.20ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ದೂರುದಾರರ ಪರ ಮಂಗಳೂರಿನ ವೆರಿಟಾಸ್ ಲೆಗೀಸ್ ಅಸೋಸಿಯೇಷನ್‌ನ ವಕೀಲರಾದ ರಾಘವೇಂದ್ರ ರಾವ್ ಮತ್ತು ಗೌರಿ ಶೆಣೈ ವಾದಿಸಿದ್ದರು.