ನವದೆಹಲಿ: ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ವ್ಯಕ್ತಿಯೊಬ್ಬರು ನೋಡು ನೋಡುತ್ತಿದ್ದಂತೆಯೇ ಸುಂದರವಾದ ಮನೆಯನ್ನು ನಿರ್ಮಿಸಿದರು. ಇದಿಷ್ಟೇ ಅಲ್ಲದೆ, ಬೆಂಜ್, ಜಾಗ್ವಾರ್ ಹಾಗೂ ರೋಲ್ಸ್ ರಾಯ್ಸ್ ಮುಂತಾದ ಐಷಾರಾಮಿ ಕಾರುಗಳನ್ನು ಸಹ ಖರೀದಿ ಮಾಡಿದರು. ಸಾಮಾನ್ಯ ಶಾಲಾ ಶಿಕ್ಷಕರಾಗಿರುವ ಅವರಿಗೆ ಇದೆಲ್ಲ ಹೇಗೆ ಸಾಧ್ಯ? ಎಂಬ ನಿಮ್ಮ ಪ್ರಶ್ನೆಗೆ ಅಚ್ಚರಿಯ ಉತ್ತರ ಇಲ್ಲಿದೆ ನೋಡಿ.
ಸಾಮಾಜಿಕ ಜಾಲತಾಣ ಎಂಬುದು ಒಂದು ಪ್ರಬಲ ಅಸ್ತ್ರ. ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಡಲು ಮತ್ತು ಸಮರ ಸಾರಲು ಸಾಮಾಜಿಕ ಮಾಧ್ಯಮಕ್ಕಿಂತ ಉತ್ತಮವಾದ ಅಸ್ತ್ರ ಮತ್ತೊಂದಿಲ್ಲ. ಇಂದು ಸಾಮಾಜಿಕ ಜಾಲತಾಣಗಳು ಅನೇಕ ಪ್ರತಿಭಾವಂತರನ್ನು ಜಗತ್ತಿಗೆ ಪರಿಚಯಿಸಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಪ್ರಭಾವಿಗಳಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವ್ಲಾಗ್ ಮತ್ತು ರೀಲ್‌ಗಳನ್ನು ಹಂಚಿಕೊಳ್ಳುವ ಮೂಲಕ ಉತ್ತಮ ಹಣವನ್ನು ಗಳಿಸುತ್ತಿದ್ದಾರೆ. ಅವರಲ್ಲಿ ಈ ಶಾಲೆಯ ಶಿಕ್ಷಕರು ಕೂಡ ಒಬ್ಬರು. ಅವರ ಹೆಸರು ಪಿಆರ್ ಸುಂದರ್.
ಸುಂದರ್ ಅವರು ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಅತ್ಯಂತ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಚೆನ್ನೈ ಮೂಲದವರು. ಚೆನ್ನೈನಲ್ಲಿ ಪಿಜಿ ಮಾಡಿದ ನಂತರ ಗುಜರಾತ್‌ನ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿ ಪರಿಚಯವಾದ ಗೆಳೆಯರೊಂದಿಗೆ ಷೇರುಪೇಟೆ ವಹಿವಾಟಿನ ಬಗ್ಗೆ ತಿಳಿದುಕೊಂಡರು. 1987ರಿಂದ 1993ರವರೆಗೆ ಗುಜರಾತಿನಲ್ಲಿ ಕೆಲಸ ಮಾಡಿ, ನಂತರ ಸಿಂಗಾಪುರಕ್ಕೆ ಶಿಕ್ಷಕರಾಗಿ ಹೋದರು. ಇದಾದ ಬಳಿಕ 2005ರಲ್ಲಿ ತಮ್ಮ ದೇಶಕ್ಕೆ ಮರಳಿದರು.
2007ರಲ್ಲಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ಗೆ ಎಂಟ್ರಿ ಕೊಟ್ಟರು. ಯೂಟ್ಯೂಬ್ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ಉತ್ತಮ ಮನ್ನಣೆ ಪಡೆದರು. ಇದರಿಂದ ಉತ್ತಮ ಆದಾಯ ಗಳಿಸಿದ ಸುಂದರ್ ಅವರು ಇಂದು 30 ಕೋಟಿ ರೂಪಾಯಿ ಮೌಲ್ಯದ ಮನೆಯಲ್ಲಿ ವಾಸವಾಗಿದ್ದಾರೆ. ಅವರು ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಮತ್ತು ಜಾಗ್ವಾರ್ ಕಾರುಗಳನ್ನು ಹೊಂದಿದ್ದಾರೆ.
ತಮ್ಮ ಕನಸಿನ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಾರನ್ನು ಸಹ ಇತ್ತೀಚೆಗೆ ಖರೀದಿ ಮಾಡಿದ್ದಾರೆ. ಭಾರತದಲ್ಲಿ ಖರೀದಿಸಿದರೆ 14 ಕೋಟಿ ಖರ್ಚಾಗುತ್ತದೆ. ಹೀಗಾಗಿ ದುಬೈನಲ್ಲಿ ಖರೀದಿಸಿ ಸಾರಿಗೆ ಮೂಲಕ ಇಲ್ಲಿಗೆ ತಂದಿದ್ದಾರೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ದುಬೈನಲ್ಲಿ 7 ಕೋಟಿಗೆ ಖರೀದಿಸಿದ್ದಾಗಿ ಹೇಳಿದ್ದಾರೆ. ಆ ಕಾರನ್ನು ಭಾರತಕ್ಕೆ ತರಲು 7.8 ಲಕ್ಷದವರೆಗೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಸುಂದರ್ ಅವರು ಶಾಲಾ ಶಿಕ್ಷಕರಿಂದ ರೋಲ್ಸ್ ರಾಯ್ಸ್ ಕಾರು ಮಾಲೀಕರಾಗಿ ಬೆಳೆದಿದ್ದು, ಅವರ ಜೀವನ ಹಲವರಿಗೆ ಸ್ಫೂರ್ತಿದಾಯಕವಾಗಿದೆ. (ಏಜೆನ್ಸೀಸ್)