ನ್ಯೂಸ್

ಮೇ 1 ರಿಂದ ಬಾಳೆಕುಟ್ಟಿರ ಕೇರ್‌ಬಲಿ ನಮ್ಮೆ

ವಿರಾಜಪೇಟೆ : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸಹಯೋಗದಲ್ಲಿ ನಾಲ್ಕನೇ ವರ್ಷದ ಪುರುಷರು ಹಾಗೂ ಮಹಿಳೆಯರ ಕೇರ್‌ಬಲಿ ನಮ್ಮೆ ಅರಮೇರಿ-ಮೈತಾಡಿಯ ಬಾಳೇಕುಟ್ಟಿರ ಕುಟುಂಬ ನಡೆಸುತ್ತಿದ್ದು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಾಳೆಕುಟ್ಟಿರ ಕುಟುಂಬದ ಅಧ್ಯಕ್ಷ ಮಂದಣ್ಣ ಹೇಳಿದರು.

ಅರಮೇರಿಯ ಎ.ಎಂ.ಎಸ್. ವಿದ್ಯಾಸಂಸ್ಥೆಯ ಶಾಲಾ ಮೈದಾನದಲ್ಲಿ ಮೇ 2, 3 ಮತ್ತು 4 ರಂದು ಕೇರ್‌ಬಲಿ (ಹಗ್ಗಜಗ್ಗಾಟ) ನಮ್ಮೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಫೈನಲ್ ಪಂದ್ಯಾಟ ಮೇ 4 ರಂದು ನಡೆಯಬೇಕಾಗಿತ್ತು. ಆದರೆ ಮೇ 4 ರಂದು ನೀಟ್ ಪರೀಕ್ಷೆ ನಡೆಯುವ ಕಾರಣ ಕೇರ್‌ಬಲಿ ನಮ್ಮೆಯನ್ನು ಮೇ 1ರಿಂದ 3 ರವರೆಗೆ ನಡೆಸಲಾಗುತ್ತಿದ್ದು, 3 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮೆಯಲ್ಲಿ 250ಕ್ಕೂ ಅಧಿಕ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 150 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ. ಟಗ್ ಆಫ್ ವಾರ್ ಅಕಾಡೆಮಿ, ಕುಟುಂಬ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ನಮ್ಮೆಯನ್ನು ಅದ್ದೂರಿಯಾಗಿ ನಡೆಸಲಾಗುವುದು. ಅರಮೇರಿ ಗ್ರಾಮದಲ್ಲಿರುವ ಹೆಗ್ಗಡೆ ಮತ್ತು ಐರಿ ಜನಾಂಗಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಹೇಳಿದರು.

ಸಂಚಾಲಕ ಬಾಳೆಕುಟ್ಟಿರ ದಿನಿ ಬೋಪಯ್ಯ ಮಾತನಾಡಿ, ಕೇರ್‌ಬಲಿ ನಮ್ಮೆಯಲ್ಲಿ ಈವರೆಗೆ ಚೂಡಿ ಹಗ್ಗವನ್ನು ಬಳಸಲಾಗುತ್ತಿತ್ತು ಈ ಬಾರಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ (ಹತ್ತಿಯಿಂದ ನಿರ್ಮಿತವಾದ) ಹಗ್ಗವನ್ನು ಬಳಸಲಾಗುತ್ತಿದೆ. ಪಂದ್ಯಾಟದ ವಿಜೇತರಿಗೆ ಪ್ರಥಮ ಬಹುಮಾನ 50 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 30 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ 20 ಸಾವಿರ ಹಾಗೂ ಟ್ರೋಫಿ, ನಾಲ್ಕನೇ ಬಹುಮಾನ 10 ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಉತ್ತಯ್ಯ, ಗಣು ಕಾವೇರಪ್ಪ, ಪೂಜಾ ಲೋಕೇಶ್ ಉಪಸ್ಥಿತರಿದ್ದರು.