ನವದೆಹಲಿ: ಬ್ರಿಟಿಷರ ಪಳೆಯುಳಿಕೆಗಳಲ್ಲಿ ಒಂದಾದ ಇಂಡಿಯನ್ ಪೀನಲ್ ಕೋಡ್ (ಐಪಿಸಿ), ಕ್ರಿಮಿನಲ್ ಪೀನಲ್ ಕೋಡ್ (ಸಿಆರ್ಪಿಸಿ) ಸೋಮವಾರದಿಂದ ಇತಿಹಾಸದ ಪುಟ ಸೇರಲಿವೆ. ಬದಲಿಗೆ, ಕೇಂದ್ರದ ಎನ್ಡಿಎ ಸರ್ಕಾರ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜಾರಿಗೆ ಬರಲಿವೆ.
ಸರ್ಕಾರ ಸಂಸತ್ತಿನಲ್ಲಿ ಈ ಸಂಬಂಧದ ವಿಧೇಯಕಗಳಿಗೆ 2023ರ ಡಿ. 21ರಂದು ಅನುಮೋದನೆ ಪಡೆದಿದೆ. ಡಿ. 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಪಶ್ಚಿಮ ಬಂಗಾಳವೂ ಸೇರಿದಂತೆ ಕೆಲವು ರಾಜ್ಯಗಳು ಹೊಸ ಅಪರಾಧ ಕಾನೂನು ಜಾರಿ ಮುಂದೂಡುವಂತೆ ಆಗ್ರಹಿಸಿದ್ದರೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಸೋಮವಾರದಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಸೆಕ್ಷನ್ಗಳನ್ನು ಬರೆಯಲು ಪೊಲೀಸರು ಸಿದ್ಧರಾಗಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆ ಅವಧಿ 90 ದಿನಗಳಿಂದ 60 ದಿನಕ್ಕೆ ಇಳಿಕೆ, ತೀರ್ಪು ನೀಡುವ ಅವಧಿ 60 ದಿನಗಳಿಂದ 45 ದಿನಗಳಿಗೆ ಇಳಿಕೆ ಮಾಡಲಾಗಿದ್ದು, ಇದರಿಂದ ತ್ವರಿತ ನ್ಯಾಯನೀಡಿಕೆ ಸಾಧ್ಯವಾಗಲಿದೆ. ಆರೋಪಿ ಬಿಡುಗಡೆ, ಪೋಕ್ಸೋ ಸಂಬಂಧಿತ ವರದಿ ಸಲ್ಲಿಕೆ, ಎಲೆಕ್ಟ್ರಾನಿಕ್ ಉಪಕರಣ ಮೂಲಕ ಸಮನ್ಸ್ ತಲುಪಿಸುವುದು ಸೇರಿದಂತೆ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ.
46ಕ್ಕೂ ಅಧಿಕ ಸೆಕ್ಷನ್ಗಳನ್ನು ಬದಲಿಸಲಾಗಿದೆ. ಇನ್ನು ಮುಂದೆ ಆತ್ಮಹತ್ಯೆ ವರದಿಯನ್ನು 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಬೇಕು. ವರದಿ, ಸಮನ್ಸ್ಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಲ್ಲಿಸಬಹುದು. 60 ವರ್ಷ ಮೇಲ್ಪಟ್ಟ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಪೊಲೀಸರು ಠಾಣೆಗೆ ಕರೆಸುವಂತಿಲ್ಲ. ಆರೋಪಿ ತಾನು ಇದ್ದಲ್ಲಿಂದಲೇ ಆಡಿಯೋ/ವಿಡಿಯೋ ಮೂಲಕ ವಿಚಾರಣೆಗೆ ಹಾಜರಾಗಬಹುದು.