ನ್ಯೂಸ್

ಅಂದು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ವೈದ್ಯೆ! ಬಡತನ ಸೋಲಿಸಿದ ಪಿಂಕಿ ಹರ್ಯಾನ್​ ಯಶೋಗಾಥೆ | Pinki Haryan

ನವದೆಹಲಿ: ಆತ್ಮವಿಶ್ವಾಸ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ 24 ವರ್ಷದ ಪಿಂಕಿ ಹರ್ಯಾನ್ ( Pinki Haryan ) ತಾಜಾ ಉದಾಹರಣೆಯಾಗಿದ್ದಾರೆ. ಬೀದಿಯಲ್ಲಿ ಭಿಕ್ಷೆ ಬೇಡುತ್ತಾ, ಗುಡಿಸಲಿನ ಊಟ ತಿಂದು, ಕೊಳೆಗೇರಿಯ ಅನೈರ್ಮಲ್ಯದಲ್ಲಿ ಮಲಗಿ ತನ್ನ ಬಾಲ್ಯವನ್ನು ಕಳೆದ ಬಾಲಕಿಯೊಬ್ಬಳು ಇಂದು ವೈದ್ಯೆಯಾಗಿ ಎಲ್ಲರ ಮುಂದೆ ನಿಂತಿರುವುದು ನಿಜಕ್ಕೂ ಸ್ಫೂರ್ತಿ.

2004ರಲ್ಲಿ ಟಿಬೆಟಿಯನ್ ಸನ್ಯಾಸಿ ಹಾಗೂ ಧರ್ಮಶಾಲಾ ಮೂಲದ ಚಾರಿಟಬಲ್ ಟ್ರಸ್ಟ್‌ನ ನಿರ್ದೇಶಕ ಲೋಬ್ಸಾಂಗ್ ಜಮ್ಯಾಂಗ್ ಅವರು ಹಿಮಾಚಲ ಪ್ರದೇಶದ ಮೆಕ್ಲಿಯೋಡ್‌ಗಂಜ್‌ನಲ್ಲಿ ನಾಲ್ಕೂವರೆ ವರ್ಷದ ಬಾಲಕಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಮತ್ತು ತಿನ್ನಲು ಸಹ ಕಷ್ಟಪಡುತ್ತಿರುವುದನ್ನು ನೋಡಿದರು. ಇದಾದ ಬಳಿಕ ಜಮ್ಯಾಂಗ್ ಅವರು ಆ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಅಂದು ಆಕೆಯ ಜೀವನವೇ ಬದಲಾಯಿತು. ಪಿಂಕಿಯ ತಂದೆ ಕಾಶ್ಮೀರಿ ಲಾಲ್​ ಅವರೊಂದಿಗೆ ಮಾತನಾಡಿದ ಜಮ್ಯಾಂಗ್​, ಆಕೆಯನ್ನು ಧರ್ಮಶಾಲಾದ ದಯಾನಂದ ಪಬ್ಲಿಕ್ ಶಾಲೆಗೆ ಸೇರಿಸಲು ಮನವೊಲಿಸಿದರು.

2004ರಲ್ಲಿ ಧರ್ಮಶಾಲಾದಲ್ಲಿ ಟೋಂಗ್-ಲೇನ್ ಚಾರಿಟಬಲ್ ಟ್ರಸ್ಟ್ ನಿರ್ಮಿಸಿದ ನಿರ್ಗತಿಕ ಮಕ್ಕಳ ಹಾಸ್ಟೆಲ್‌ನಲ್ಲಿ ಮೊದಲ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಪಿಂಕಿ ಹರ್ಯಾನ್​ ಕೂಡ ಒಬ್ಬರು. ಆರಂಭದಲ್ಲಿ ಹಲವು ಸಮಸ್ಯೆಗಳು ಎದುರಾದವು. ಕುಟುಂಬವನ್ನು ಬಿಟ್ಟು ಹೋಗುವುದಕ್ಕೆ ಬೇಸರವಾಗಿದ್ದರೂ ಪಿಂಕಿ ತನ್ನ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಳು. ಕಷ್ಟದ ದಿನಗಳನ್ನು ನೆನೆದು ಓದಿನ ಕಡೆ ಹೆಚ್ಚು ಗಮನ ಹರಿಸಿದರು. ಪಿಂಕಿಯ ಶ್ರಮ ಕೊನೆಗೂ ಫಲ ನೀಡಿದೆ.

ಪಿಂಕಿ, ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ತೇರ್ಗಡೆಗೊಳಿಸಿದರು. ಆದರೆ, ಭಾರತದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳ ಭಾರೀ ಶುಲ್ಕದಿಂದ ಆಕೆಯ ಓದಿಗೆ ಅಡಚಣೆಯಾಯಿತು. ಅಂತಹ ಪರಿಸ್ಥಿತಿಯಲ್ಲಿ ಟಾಂಗ್-ಲೆನ್ ಚಾರಿಟೇಬಲ್ ಟ್ರಸ್ಟ್ ಮತ್ತೆ ಪಿಂಕಿಗೆ ಸಹಾಯ ಮಾಡಿತು. 2018ರಲ್ಲಿ ಚೀನಾದ ಪ್ರಸಿದ್ಧ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಲು ಪಿಂಕಿ ಸೇರಿಸಿಕೊಂಡರು.

ಚೀನಾದಲ್ಲಿ ತನ್ನ ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಪಿಂಕಿ ಭಾರತಕ್ಕೆ ಮರಳಿದ್ದಾರೆ. ಸದ್ಯ ಪಿಂಕಿ ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ ( FMGE ) ಗೆ ತಯಾರಿ ನಡೆಸುತ್ತಿದ್ದಾರೆ. ವಿದೇಶದಿಂದ ಎಂಬಿಬಿಎಸ್​ ಪದವಿ ಪಡೆದು ಬಂದವರು ಎಫ್​ಎಂಜಿಇಯನ್ನು ತೇರ್ಗಡೆಗೊಳಿಸಬೇಕು. ಆಗ ಮಾತ್ರ ಅವರು ಭಾರತದಲ್ಲಿ ಅಧಿಕೃತವಾಗಿ ವೈದ್ಯರಾಗಬಹುದು.

ದೇಶದಲ್ಲೇ ಹೆಸರಾಂತ ಶಸ್ತ್ರಚಿಕಿತ್ಸಕಳಾಗಿ ಬಡವರಿಗೆ ಸಹಾಯ ಮಾಡುವುದೇ ನನ್ನ ಮುಂದಿನ ಬದುಕು ಎನ್ನುತ್ತಾರೆ ಪಿಂಕಿ ಹರ್ಯಾನ್​. (ಏಜೆನ್ಸೀಸ್​)