ಸತ್ಯಾತ್ಮತೀರ್ಥ ಶ್ರೀ 
ನ್ಯೂಸ್

31ರಿಂದ ಸತ್ಯಾತ್ಮತೀರ್ಥ ಶ್ರೀಗಳಿಂದ ಶ್ರೀರಾಮನ ಆದರ್ಶ ಅನುಗ್ರಹ ಸಂದೇಶ

ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯಿಂದ ಶ್ರೀರಾಮನ ಆದರ್ಶ ಅನುಗ್ರಹ ಸಂದೇಶ ಪ್ರವಚನವನ್ನು ಡಿ.31ರಿಂದ ಜನವರಿ ಜ.2ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಕಾರ್ಯಕರ್ತೆ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಹೇಳಿದರು.

ಶ್ರೀಗಂಧ ಸಂಸ್ಥೆ ಹಲವು ವೈವಿಧ್ಯಮಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಪ್ರತಿದಿನ ಸಂಜೆ 6ರಿಂದ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಶ್ರೀರಾಮನ ಆದರ್ಶ ಕುರಿತು ವಿಶೇಷ ಪ್ರವಚನ ಹಾಗೂ ಅನುಗ್ರಹ ಸಂದೇಶ ಇರಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರವಚನಕ್ಕಿಂತ ಮುಂಚಿತವಾಗಿ ವಿದ್ವಾಂಸರಾದ ಪಂಡಿತ್ ಶ್ರೀ ನವರತ್ನ ಶ್ರೀನಿವಾಸ್ ಆಚಾರ್, ಸಂಡೂರಿನ ಶ್ರೀ ರಘೋತ್ತಮಾಚಾರ್, ರಾಯಚೂರಿನ ಕೃಷ್ಣಾಚಾರ್ ಅವರು ಸನಾತನ ಧರ್ಮದ ಸಾರ ವಿಷಯವಾಗಿ ಚರ್ಚೆ ನಡೆಸಿಕೊಡುವರು. ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮನವಿ ಮೇರೆಗೆ ಶಿವಮೊಗ್ಗ ಜನತೆಗೆ ಒಂದು ಧಾರ್ಮಿಕ ಕಲ್ಪನೆ, ಧಾರ್ಮಿಕ ಮನೋಭಾವ ಜಾಗೃತಿಯಿದ್ದರೂ ಅದು ಮತ್ತಷ್ಟು ಉದ್ದೀಪನಗೊಳ್ಳುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರ್ಮಿಕ ವಿದ್ವಾಂಸರು. ಅವರು ಒಮ್ಮೆ ನನ್ನನ್ನು ಪ್ರತ್ಯೇಕವಾಗಿ ಕರೆದು ಗೋಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಬೇಕೆಂದು ತಿಳಿಸಿದ್ದರು. ಆಗ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದರು. ಅವರಿಗೆ ನಾನು ಶ್ರೀಗಳ ಸಂದೇಶ ತಲುಪಿಸಿದ್ದೆ. ಆಗ ಅಧಿವೇಶನದಲ್ಲಿ ಮಸೂದೆ ಪಾಸಾಗಿತ್ತು. ಗೋಹತ್ಯೆ ನಿಷೇಧ ಬಗ್ಗೆ ಪ್ರಸ್ತಾಪಿಸಿದ್ದ ಶ್ರೀಗಳ ಬಗ್ಗೆ ಗೌರವ ಮತ್ತಷ್ಟು ಇಮ್ಮಡಿಯಾಗಿತ್ತು ಎಂದು ಹೇಳಿದರು.

ಪ್ರಮುಖರಾದ ಶಬರೀಶ್ ಕಣ್ಣನ್, ಎಸ್.ಜಿ.ಬಾಲು, ಉಮೇಶ್ ಆರಾಧ್ಯ, ಕುಬೇರಪ್ಪ, ತುಕಾರಾಮ್, ಶಿವಾಜಿ, ಅರವಿಂದ್ ಸುದ್ದಿಗೋಷ್ಠಿಯಲ್ಲಿದ್ದರು.