ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿಯ ವೇಳೆ ಮದ್ಯ ಸೇವಿಸಿ ಬಳಿಕ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.
ಕೆಂಬತ್ತಹಳ್ಳಿ ನಿವಾಸಿ ಸೋಲೋಮನ್(೨೮), ಆತನ ಸ್ನೇಹಿತ ಜ್ಞಾನಭಾರತಿ ನಿವಾಸಿ ಅಭಿಷೇಕ್(೨೭) ಮೃತರು. ಸೋಲೋಮನ್ ಸೆಕೆಂಡ್ ಹ್ಯಾಂಡ್ ಶೋರೂಮ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಅಭಿಷೇಕ್ ಜೆ.ಪಿ.ನಗರದಲ್ಲಿ ಕಾಲ್ ಸೆಂಟರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಎರಡ್ಮೂರು ವರ್ಷಗಳಿಂದ ಸ್ನೇಹಿತರಾಗಿದ್ದರು. ವಾರಕ್ಕೊಮ್ಮೆ ಪಾರ್ಟಿ ಮಾಡುತ್ತಿದ್ದರು.
ಸೋಲೋಮನ್ ಹುಳಿಮಾವು ಸಮೀಪದ ಚಿಕ್ಕಕಮ್ಮನಹಳ್ಳಿಯ ಕೆರೆ ಪಕ್ಕದಲ್ಲೇ ಇತ್ತೀಚೆಗಷ್ಟೇ ಹೊಸದಾಗಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಆ.೨೬ರಂದು ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿ ಸ್ನೇಹಿತ ಅಭಿಷೇಕ್ ಜತೆ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಇಬ್ಬರು ಅರೆಬೆತ್ತಲಾಗಿ ರಾತ್ರಿ ವೇಳೆ ಈಜಲು ಹೋಗಿದ್ದಾರೆ. ಕೆರೆಗೆ ಕಲುಷಿತ ನೀರು ಸೇರಿಕೊಂಡಿದ್ದು, ಇಬ್ಬರು ಕೆರೆಗೆ ಇಳಿದು ಈಜಲು ಆರಂಭಿಸುತ್ತಿದ್ದಂತೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಕಾನೂನು ಪ್ರಕ್ರಿಯೆ ಮುಗಿಸಿ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ.
ಮದುವೆ ತಯಾರಿಯಲ್ಲಿದ್ದ
ಮಾನಸಿಕ ಖಿನ್ನತೆಗೊಳಗಾಗಿದ್ದ ಸೋಲೋಮನ್‌ಗೆ ಆತನ ಪಾಲಕರು ಎರಡು ತಿಂಗಳ ಹಿಂದಷ್ಟೇ ಯುವತಿಯೊಬ್ಬಳ ಜತೆ ನಿಶ್ಚಿತಾರ್ಥ ನೆರವೇರಿಸಿದ್ದರು. ಹೀಗಾಗಿ ಚಿಕ್ಕಕಮ್ಮನಹಳ್ಳಿಯ ಕೆರೆ ಪಕ್ಕದಲ್ಲೇ ಹೊಸದಾಗಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಇನ್ನು ಅಭಿಷೇಕ್ ಪಾಲಕರು ಜ್ಞಾನಭಾರತಿಯಲ್ಲಿ ವಾಸವಾಗಿದ್ದು, ಈತ ಮನೆಗೆ ಹೋಗದೆ, ಪಿಜಿಯಲ್ಲಿ ವಾಸವಾಗಿದ್ದ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.