ನ್ಯೂಸ್

ಫ್ರಾನ್ಸ್​ಗೆ ಮತ್ತೆ ಬಂದಿದೆ ಗಂಡಾಂತರ, 1950ರಲ್ಲಿಯೂ ಕಾಡಿತ್ತು ಈ ಸಮಸ್ಯೆ; ಕೇಳಿದರೆ ಬೆಚ್ಚಿಬೀಳುವುದು ಗ್ಯಾರಂಟಿ!

malli

ಫ್ರಾನ್ಸ್​ ದೇಶ ಸದ್ಯ ದೊಡ್ಡದೊಂದು ಸಮಸ್ಯೆಯನ್ನು ಎದುರಿಸುತ್ತಿದೆ. ಅದಕ್ಕಾಗಿ ಅದು ಅಭಿಯಾನ ಆರಂಭಿಸಿದ್ದು, ಒಂದು ಕಾಲ್​ ಸೆಂಟರ್​ ಮತ್ತು ವೆಬ್​ಸೈಟ್​ ಕೂಡ ತೆರೆದಿದೆ!

ಅಭಿಯಾನವು ಮನೆಗಳಲ್ಲಿನ ಪೀಠೋಪಕರಣ ಕಾಪಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಟ್‌ಲೈನ್ ಸಂಖ್ಯೆ ಕರೆ ಮಾಡಿ ತಿಳಿಯಬಹುದು. ಅಲ್ಲದೆ, ವೆಬ್‌ಸೈಟ್​ನಲ್ಲೂ ಆ ಬಗ್ಗೆ ಮಾಹಿತಿ ನೀಡಲಾಗಿದೆ.

"ನಾವೆಲ್ಲರೂ ಇದರ ಪರಿಣಾಮ ಎದುರಿಸಲೇಬೇಕು. ಇಂತಹ ಪರಾವಲಂಬಿ ಜೀವಿಗಳು ನಮ್ಮ ಹತ್ತಿರ ಸುಳಿಯದಂತೆ ಎಚ್ಚರ ವಹಿಸಬೇಕು" ಎಂದು ವೆಬ್​ಸೈಟ್​ನಲ್ಲಿ ಸೂಚಿಸಲಾಗಿದೆ. ಅದರಲ್ಲೂ ನಮ್ಮ ಸೋಫಾ ಸೆಟ್​ಗಳು ಮತ್ತು ಹಾಸಿಗೆಗಳ ಮೇಲೆ ನಿಗಾ ವಹಿಸಬೇಕು ಎಂದಿದೆ.

ಅಷ್ಟಕ್ಕೂ ಇಡೀ ದೇಶಕ್ಕೆ ಬಂದಿರುವ ತೊಂದರೆ ಕೊರೊನಾ ವೈರಸ್​ನಂತಹ ಮಾರಕ ರೋಗ ಅಲ್ಲವಾದರೂ ಇದರ ಕಾಟ ಮಾತ್ರ ತಡೆಯಲಾಗಲ್ಲ. ಫ್ರಾನ್ಸ್​ ತೊಂದರೆಗೀಡಾಗಿರುವುದು ತಿಗಣೆಗಳಿಂದ! ಅದು ಎಷ್ಟರಮಟ್ಟಿಗೆ ಎಂದರೆ ಸರ್ಕಾರವೇ ಇದರ ವಿರುದ್ಧ ಆಂದೋಲನ ಆರಂಭಿಸುವಷ್ಟು.

ಅದಕ್ಕಾಗಿ ಆರಂಭಿಸಿರುವ ವೆಬ್​ಸೈಟ್​ನಲ್ಲಿ "ತಿಗಣೆಗಳು ಒಂದು ರಾತ್ರಿಗೆ ಕಡಿಮೆ ಎಂದರೂ 90 ಬಾರಿ ಕಚ್ಚುತ್ತವೆ. ಅದರಿಂದ ದೇಹದ ಮೇಲೆ ಕೆಂಪನೆಯ ಕಲೆಗಳಾಗುತ್ತವೆ. ಇದು ನೋಡುವುದಕ್ಕೆ ಥೇಟ್​ ಸೊಳ್ಳೆ ಕಚ್ಚಿದ ಕಲೆಗಳಂತೆ ಇರುತ್ತವೆ" ಎಂದೆಲ್ಲ ಮಾಹಿತಿ ನೀಡಲಾಗಿದೆ. ಇಂತಹ ತಿಗಣೆ ಕಡಿತದಿಂದ ತಪ್ಪಿಸಿಕೊಳ್ಳುವುದ ಅಸಾಧ್ಯ ಎಂದು ಎಚ್ಚರಿಸಲಾಗಿದೆ.

ಹೀಗೆ ಫ್ರಾನ್ಸ್​ನ್ನು ಕಾಡುತ್ತಿರುವ ತಿಗಣೆ ಸಮಸ್ಯೆ ಬಂದಿರುವುದು ಪ್ರವಾಸಿಗಳಿಂದ ಎನ್ನುವುದು ಅಲ್ಲಿ ಸರ್ಕಾರದ ಅಭಿಪ್ರಾಯ. ವಿದೇಶಿ ಪ್ರವಾಸಿಗರು ಮೂಲಕ ಬಂದ ತಿಗಣೆಗಳು ಫ್ರಾನ್ಸ್​ನಲ್ಲೇ ಠಿಕಾಣಿ ಹೂಡಿವೆ.

ಅದಕ್ಕೆ ಸರ್ಕಾರ ಅಲ್ಲಿನ ನಾಗರಿಕರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದೆ. ನೀವು ನಿಮ್ಮ ಬಟ್ಟೆಗಳನ್ನು 60 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚು ಬಿಸಿಯಾದ ನೀರಿನಿಂದ ತೊಳೆದು ನಂತರ ಧರಿಸಿ ಎನ್ನುವುದು ಪ್ರಮುಖವಾದದ್ದು.

ಫ್ರಾನ್ಸ್​ಗೆ ಈ ತೆರನಾದ ತಿಗಣೆ ಸಮಸ್ಯೆ ಬಂದಿರುವುದು ಇದೇ ಮೊದಲೇನಲ್ಲ. 1950ರಲ್ಲಿ ತಿಗಣೆ ಕಾಟ ಆರಂಭವಾಗಿ ಜನ ಜೀವನ ಮತ್ತು ನಿದ್ರೆಯನ್ನು ಹಾಳು ಮಾಡಿತ್ತು ಎನ್ನುತ್ತದೆ ಫ್ರಾನ್ಸ್​ ದೇಶದ ಇತಿಹಾಸ. (ಏಜೆನ್ಸೀಸ್​)