ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಅವರು ಸಭಿಕರಿಗೆ ಸಂವಿಧಾನ ಆಶಯ ಪುಸ್ತಕ ನೀಡಿದರು. ಕೆ.ಪಿ.ಶ್ರೀಪಾಲ್, ಡಿ.ಮಂಜುನಾಥ, ಫಾದರ್ ಕ್ಲಿಫರ್ಡ್‌ರೋಷನ್ ಪಿಂಟೊ, ಎಂ.ಗುರುಮೂರ್ತಿ, ಭಾಗ್ಯಮ್ಮ,ಡಿ.ಜಿ.ಶಿವಮೂರ್ತಿ, ಅಣ್ಣಪ್ಪ ಇದ್ದರು. 
ನ್ಯೂಸ್

ಸಂವಿಧಾನ ಉಳಿವಿಗೆ ಸ್ವಾತಂತ್ರ್ಯ ಸಂಗ್ರಾಮ ಅಗತ್ಯ

ಶಿವಮೊಗ್ಗ: ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆಗಬೇಕಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಪ್ರತಿಪಾದಿಸಿದರು.

ನಗರದ ವಕೀಲರ ಭವನದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪೀಪಲ್ಸ್ ಲಾಯರ್ಸ್ ಗಿಲ್ಡ್ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ಸಂವಿಧಾನದ ಆಶಯಗಳು ಮತ್ತು ಭಾವೈಕ್ಯತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇತಿಹಾಸವನ್ನು ಕೆದಕಿದಾಗ ಹೋರಾಟಗಳಿಂದ ಮಾತ್ರ ಅನೇಕ ಬದಲಾವಣೆಗಳು ಸಾಧ್ಯವಾಗಿದೆ. ಹಾಗಾಗಿ ಇಂದು ಸಹ ಸ್ವಾತಂತ್ರ್ಯ ಸಂಗ್ರಾಮದಂತಹ ತೀವ್ರ ಸ್ವರೂಪದ ಹೋರಾಟ ಆಗಬೇಕಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ ಎಂದರು.
ಎಲ್ಲ ಮಹಿಳೆಯರಿಗೆ, ದುರ್ಬಲರಿಗೆ ಸಂವಿಧಾನದ ಆಶಯ ತಲುಪಿಸಿದ್ದೀರಾ ಎಂದು ಸರ್ಕಾರಗಳನ್ನು ಪ್ರಶ್ನಿಸಿದಾಗ ಅವರಿಂದ ಉತ್ತರವಿಲ್ಲ. ಸ್ಟಾರ್ ಹೋಟೆಲ್ಗಳಿಗಿಂತ ರುಚಿಯಾಗಿ ಬಿಸಿಯೂಟದ ಮಹಿಳೆಯರು ಅಡುಗೆ ಮಾಡುತ್ತಾರೆ. ಆದರೆ ಸರ್ಕಾರ ಅಂತಹ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲದೆ ಉಪೇಕ್ಷೆ ಮಾಡುತ್ತಿದೆ. ನಮ್ಮ ನಡುವೆ ಇರುವವರು ನ್ಯಾಯ ನೀಡುವ ಆಡಳಿತಗಾರರಲ್ಲ, ಬಂಡವಾಳಶಾಹಿಗಳ ಏಜೆಂಟ್‌ಗಳು ಎಂದು ಕಿಡಿಕಾರಿದರು.
ರಾಜಕೀಯದವರಿಂದ ಸಾಮಾಜಿಕ ನ್ಯಾಯ ಸಿಗಲಾರದು. ಆದರೆ ಕೌಟುಂಬಿಕ ನ್ಯಾಯಾಲಯಗಳೂ ಸ್ವಾವಲಂಬಿ ಜೀವನ ನೀಡುವ ವ್ಯವಸ್ಥೆ ನಿರ್ಮಾಣ ಮಾಡಲಾಗದೆ ವರ್ಷಾನುಗಟ್ಟಲೆ ಎಳೆಯುತ್ತಾರೆ. ಹೃದಯವಂತಿಕೆಯೇ ಇಲ್ಲದ ಆಡಳಿತ ವ್ಯವಸ್ಥೆಯಲ್ಲಿದೆ. ಆರ್ಥಿಕ ನ್ಯಾಯವಿಲ್ಲದೆ, ಸ್ವಾವಲಂಬಿ ಜೀವನ ನಡೆಸಲಾಗದೆ, ಪೌಷ್ಟಿಕ ಆಹಾರ ಸಿಗದೆ ಅನೇಕ ಹೆಣ್ಣು ಮಕ್ಕಳು ನಲುಗುತ್ತಿದ್ದಾರೆ. ಹೋರಾಟವಿಲ್ಲದೆ ಸುಲಭವಾಗಿ ನ್ಯಾಯ ಸಿಗುವುದಿಲ್ಲ ಎಂಬ ವಾತಾವರಣವಿದೆ ಎಂದು ಹೇಳಿದರು.
ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ವಿವಿಧ ಬಣ್ಣಗಳ ಬಟ್ಟೆಯನ್ನು ಹೊಲೆದು ಸರ್ವಧರ್ಮೀಯ ವಾತಾವರಣ ನಿರ್ಮಾಣ ಮಾಡಲು ಅನೇಕ ಪ್ರಯತ್ನಗಳು ನಡೆಯುತ್ತಿದೆ. ವಿಶ್ವಮಾನವ ಸಂದೇಶ ಸಾರಿದ ಶಿವಮೊಗ್ಗದಲ್ಲಿ ಭಾವೈಕ್ಯತೆಯ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಡಿ.ಮಂಜುನಾಥ, ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ನಿರ್ದೇಶಕ ಫಾದರ್ ಕ್ಲಿಫರ್ಡ್‌ರೋಷನ್ ಪಿಂಟೊ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜಿ.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಉಪಸ್ಥಿತರಿದ್ದರು.