ನ್ಯೂಸ್

ಸಂತಾನ ಸಮಸ್ಯೆ ನಿವಾರಣೆಗೆ ಉಚಿತ ಚಿಕಿತ್ಸೆ, ಫರ್ಟಿಲಿಟಿ ಲ್ಯಾಬ್  ಆರಂಭ

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ನೂತನ ಆಸ್ಪತ್ರೆಯಲ್ಲಿ ಸಂತಾನ ಫಲವತ್ತತೆ ಕೊರತೆ ನಿವಾರಿಸುವ ('ಫರ್ಟಿಲಿಟಿ ಲ್ಯಾಬ್) ಆರಂಭಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ
ಸತ್ಯಸಾಯಿ ಸಂಸ್ಥೆಯ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಶುಕ್ರವಾರ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವದ 63 ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.  ಫಲವತ್ತತೆ ಕೊರತೆ ನಿವಾರಿಸುವ ಚಿಕಿತ್ಸೆಗೆ ಸಂಬಂಧಿಸಿದ ಪ್ರಯೋಗಾಲಯ ಈ ಭಾಗದಲ್ಲಿ ಇರಲಿಲ್ಲ. ಹೀಗಾಗಿ ಇದರ ಸೇವೆಗೆ ಬೆಂಗಳೂರಿನಂತಹ ಮಹಾನಗರಗಳಿಗೆ ತೆರಳಬೇಕಾಗಿತ್ತು. ಇನ್ನು ಒಮ್ಮೆ ಚಿಕಿತ್ಸೆ ಪಡೆಯಲು ತಲಾ 2 ರಿಂದ 4 ಲಕ್ಷ ರೂಗಳನ್ನು ಭರಿಸಬೇಕಾದ ಪರಿಸ್ಥಿತಿ ಇದ್ದು ಇದು ಬಡವರ ಕೈಗೆಟುಕುವಂತಿರಲಿಲ್ಲ. ಇದನ್ನು ತಿಳಿದುಕೊಂಡು ಹೊಸದಾಗಿ ಪ್ರಾರಂಭವಾಗುತ್ತಿರುವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ 'ಫರ್ಟಿಲಿಟಿ ಲ್ಯಾಬ್' ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.
ಮಕ್ಕಳಾಗದವರನ್ನು ಸಮಾಜವು ಕಳಂಕ ಎನ್ನುವಂತೆ ನೋಡುವ ವಾತಾವರಣ ಇದೆ. ಇಂತಹ ಸಾಮಾಜಿಕ ಒತ್ತಡಗಳಿಂದ ಅನೇಕ ಕುಟುಂಬಗಳು ಸಾಕಷ್ಟು ನೋವು ಅನುಭವಿಸಿದ್ದು ಸಂತಾನ ಭಾಗ್ಯ ದೊರಕಿಸಿಕೊಡದ ಹೆಂಡತಿಯನ್ನು ತ್ಯಜಿಸುವ ಪತಿ, ಮತ್ತೊಂದು ಮದುವೆಯಾಗಿರುವ ಹಲವು ಉದಾಹರಣೆಗಳಿವೆ. ಬಂಜೆತನದಿಂದ ಮಹಿಳೆಯರು ಅನಿಷ್ಟತೆಯ ಕಳಂಕಕ್ಕೆ ತುತ್ತಾಗಿ, ಕಣ್ಣೀರು ಸುರಿಸುತ್ತಿದ್ದಾರೆ ಎಂದು ವಿಷಾದಿಸಿದರು.
ವಿವಿಧ ಸಮಸ್ಯೆಗಳಿಂದಾಗಿ ಗರ್ಭ ಧರಿಸಲು ತೊಂದರೆ ಅನುಭವಿಸುತ್ತಿದ್ದ 60 ಮಹಿಳೆಯರಿಗೆ ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಇದಕ್ಕೆ ಎಲ್ಲ ಪ್ರಕರಣಗಳಲ್ಲೂ ಯಶಸ್ಸಿನ ಫಲ ಸಿಕ್ಕಿದೆ ಎಂದರು.

*ಉಚಿತ ಚಿಕಿತ್ಸೆ ಸೇವೆ
ಫರ್ಟಿಲಿಟಿ ಚಿಕಿತ್ಸೆಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ದುಬಾರಿ ಶುಲ್ಕ ಇದೆ. ಇದು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ಪ್ರಕ್ರಿಯೆ. ಇದು ಒಂದೇ ಬಾರಿಗೆ ಯಶಸ್ವಿಯಾಗುತ್ತದೆ ಎಂತಲೂ ಹೇಳಲೂ ಸಾಧ್ಯವಿಲ್ಲ. ಹಾಗೆಯೇ ವಿಮಾ ನೆರವು ಯೋಜನೆಗಳ ವ್ಯಾಪ್ತಿಗೂ ಸೇರಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆಗಳು ಸಿಗುತ್ತಿಲ್ಲ. ಇದರ ನಡುವೆ ದುಬಾರಿ ಚಿಕಿತ್ಸೆಯ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ನೂತನ ಫರ್ಟಿಲಿಟಿ ಲ್ಯಾಬ್‌'ನಲ್ಲಿ ಭಾರತೀಯರು ಮಾತ್ರವಲ್ಲದೆ ವಿದೇಶಿಯರಿಗೂ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಸತ್ಯಸಾಯಿ ಸಂಸ್ಥೆ ತಿಳಿಸಿದೆ.