ಲಯನ್ಸ್ ಅಶೋಕ ಸೇವಾ ಭವನದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಡಿ.ಎನ್.ಎ. ಕರಾವಳಿ ಧ್ವನಿ ಕಾರ್ಯಕ್ರಮವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. 
ನ್ಯೂಸ್

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ

ಮಂಗಳೂರು: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೌಶಲಾಭಿವೃದ್ಧಿಗೆ ನೆರವು ನೀಡುವ ಹಾಗೂ ಉಚಿತ ವೈದ್ಯಕೀಯ ಸೇವೆ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಸಮಿತಿ ರಚಿಸಿ, ಅಭಿಪ್ರಾಯ ಕ್ರೋಢೀಕರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು ಕದ್ರಿಯ ಸರ್ಕ್ಯೂಟ್ ಹೌಸ್ ಪಕ್ಕವಿರುವ ಲಯನ್ಸ್ ಅಶೋಕ ಸೇವಾ ಭವನದಲ್ಲಿ ಮಂಗಳವಾರ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ (ಡಿ.ಎನ್.ಎ.) ಬೆಂಗಳೂರು, ಮಾಯಾ ಪೇರೇಂಟ್ಸ್ ಫಾರ್ ಇನ್ ಕ್ಲುಸಿವ್ ಡೆವಲಪ್ ಮೆಂಟ್ ಬೆಂಗಳೂರು, ಅರಿವು ಆರ್ಲಿ ಇಂಟರ್ವೆನ್ಶನ್ ಸೆಂಟರ್ ಮಂಗಳೂರು ವತಿಯಿಂದ ಲಯನ್ಸ್ ಕ್ಲಬ್ ಅಶೋಕನಗರ ಚಾರಿಟೇಬಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಸಹಯೋಗದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರ, ಎನ್.ಜಿ.ಒಗಳ ಹಾಗೂ ವೈದ್ಯರ ಸಮಾವೇಶವಾದ ಡಿ.ಎನ್.ಎ. ಕರಾವಳಿ ಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾನು ಆರೋಗ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭವೇ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ಸೇವೆ ನೀಡುವ ವಿಚಾರಕ್ಕೆ ಸಂಬಂಧಿಸಿ ಸಮಿತಿಯನ್ನು ರಚಿಸಿ, ಎಲ್ಲ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ಸರಕಾರ ಉಚಿತವಾಗಿ ವೈದ್ಯಕೀಯ ಸೇವೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮಂಗಳೂರಿನಲ್ಲಿ ಪ್ರತ್ಯೇಕ ಪಾರ್ಕ್:
ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ ಪ್ರತ್ಯೇಕ ಪಾರ್ಕ್ ಒಂದನ್ನು ಮೀಸಲಿರಿಸುವ ಕುರಿತು ಪೋಷಕರ ಬೇಡಿಕೆಗೆ ಸ್ಪಂದಿಸಿದ ಸಚಿವ ಖಾದರ್, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರತ್ಯೇಕ ಪಾರ್ಕ್ ಒಂದನ್ನು ಮೀಸಲಿಡಲಾಗುವುದು ಎಂದರು. ಸರಕಾರ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಭೆಯೊಂದನ್ನು ಕರೆದು ವಿಶೇಷ ಅಗತ್ಯವುಳ್ಳ ಮಕ್ಕಳ ಪೋಷಕರಿಗೆ ಅಗತ್ಯವಿರುವ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದವರು ಭರವಸೆ ನೀಡಿದರು.
ದ.ಕ. ಜಿಲ್ಲಾ ಪಿಯು ಕಾಲೇಜು ಪ್ರಿನ್ಸಿಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಿ. ವೇದವ್ಯಾಸ ಕಾಮತ್, ಡಿಎನ್‌ಎ ಸಲಹಾ ಸಮಿತಿ ಹಾಗೂ ಮಾಯಾ ಸಿಇಒ ವಿ.ಎಸ್. ಬಸವರಾಜು, ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಲಯನ್ಸ್ ಕ್ಲಬ್ ಅಶೋಕನಗರ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ, ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ಚೇರ್ಮನ್ ಡಾ. ಗಣಪತಿ ಪಿ., ಎ.ಜೆ.ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಸೋನ್ಸ್, ಯೆನೆಪೊಯಾ ಡೆಂಟಲ್ ಕಾಲೇಜು ಡೀನ್ ಡಾ. ಶಾಮ್ ಎಸ್. ಭಟ್, ಭಾರತೀ ಸಮೂಹ ಸಂಸ್ಥೆಗಳ ಡಾ. ರಾಜೇಂದ್ರ ಪ್ರಸಾದ್, ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜು ಮುಖ್ಯಸ್ಥೆ ಡಾ. ಅಮರಶ್ರೀ ಮತ್ತಿತತರಿದ್ದರು.
ಅರಿವು ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಅಶೋಕನಗರ ಅಧ್ಯಕ್ಷ ಪ್ರಶಾಂತ್ ಬಿ. ಶೆಟ್ಟಿ ವಂದಿಸಿದರು. ಎಂ.ಆರ್.ಡಬ್ಲ್ಯು ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.