ನ್ಯೂಸ್

5 ತಿಂಗಳಲ್ಲಿ 8,500 ಬಡವರಿಗೆ ಉಚಿತ ಕಾನೂನು ಸೇವೆ

ಪವಿತ್ರಾ ಕುಂದಾಪುರ ಬೆಂಗಳೂರು
ಮಾನವ ಕಳ್ಳಸಾಗಣೆ, ಮತೀಯ ದೌರ್ಜನ್ಯಕ್ಕೆ ಬಲಿಯಾದವರು, ಜೈಲಿನಲ್ಲಿರುವವರು, ಕೈಗಾರಿಕೆಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಸಂತ್ರಸ್ತರಾದ ಅದೆಷ್ಟೋ ಜನರು ಕಾನೂನು ಹೋರಾಟ ನಡೆಸುವಷ್ಟು ಆರ್ಥಿಕ ಸಬಲರಾಗಿಲ್ಲದ ಪರಿಣಾಮ ಸಂಕಷ್ಟದಲ್ಲಿದ್ದು, ಅಂತಹವರಿಗಾಗಿಯೇ ‘ಕಾನೂನು ಸೇವಾ ಪ್ರಾಧಿಕಾರ’ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯವನ್ನು ಸಾರ್ಥಕಗೊಳಿಸುವ ಉದ್ದೇಶ ಸಾಧನೆಯ ಹಾದಿಯಲ್ಲಿ ಕಳೆದ ಐದೇ ತಿಂಗಳಲ್ಲಿ 8,546 ಬಡವರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸಿ ನೆರವಾಗಿದೆ. 2024-25ನೇ ಸಾಲಿನ ಮೇವರೆಗೆ ದೇಶಾದ್ಯಂತ 2.25 ಲಕ್ಷ ಮಂದಿ ಉಚಿತ ಕಾನೂನು ಸೇವೆಯ ಲಾನುಭವಿಗಳಾಗಿದ್ದಾರೆ.


ದೇಶದಲ್ಲಿ ಒಟ್ಟಾರೆ 2021-22ರಲ್ಲಿ 63,69,643 ಪ್ರಕರಣ, 2022-23ನೇ ಸಾಲಿನಲ್ಲಿ 12,14,769 ಪ್ರಕರಣ, 2023-24ನೇ ಸಾಲಿನಲ್ಲಿ 15,50,164 ಪ್ರಕರಣ ಹಾಗೂ 2024-25ನೇ ಸಾಲಿನ ಮೇ ವರೆಗೆ 2,25,025 ಕೇಸ್‌ಗಳಲ್ಲಿ ಉಚಿತ ಕಾನೂನು ಸೇವೆ ಕೊಡಲಾಗಿದೆ. ಇದಕ್ಕಾಗಿ 806 ಕೋಟಿ ರೂ. ವಿನಿಯೋಗಿಸಲಾಗಿದೆ. ಇದೇ ವೇಳೆ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ 2024ರಲ್ಲಿ 4.30 ಲಕ್ಷಕ್ಕೂ ಹೆಚ್ಚು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ 4.49 ಕೋಟಿ ಜನರು ಭಾಗವಹಿಸುವ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರ ವಿವರಣೆ ಕೊಟ್ಟಿದೆ.


ಸರ್ಕಾರ ಕೊಟ್ಟಿರುವ ಅಂಕಿ-ಅಂಶಗಳ ಪ್ರಕಾರ ಉಚಿತ ಕಾನೂನು ಸೇವೆ ಪಡೆದಿರುವವರ ಬಗ್ಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ 2024ರಲ್ಲಿ ಕರ್ನಾಟಕ ತುಂಬ ಹಿಂದೆ ಉಳಿದಿದೆ. ಕಳೆದ 5 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 42,159 ಮಂದಿಗೆ ನೆರವು ಸಿಕ್ಕಿದೆ. ಜಾರ್ಖಂಡ್‌ನಲ್ಲಿ 31,855 ಬಡವರು ಸೇವೆ ಲಾನುಭವಿಗಳಾಗಿದ್ದಾರೆ. ಬಿಹಾರದಲ್ಲಿ 14,474, ದೆಹಲಿಯಲ್ಲಿ 14,031, ಚತ್ತೀಸ್‌ಗಢದಲ್ಲಿ 11,537, ಹರಿಯಾಣದಲ್ಲಿ 11,109 ಬಡವರು ಕಾನೂನು ಸೇವೆ ಪಡೆದಿದ್ದಾರೆ.


ಕರ್ನಾಟಕದಲ್ಲಿ 2021-22ನೇ ಸಾಲಿನಲ್ಲಿ 32,794 ಪ್ರಕರಣ, 2022-23ನೇ ಸಾಲಿನಲ್ಲಿ 45,663 ಪ್ರಕರಣ, 2023-24ನೇ ಸಾಲಿನಲ್ಲಿ 53,406 ಪ್ರಕರಣ ಹಾಗೂ 2024-25ನೇ ಸಾಲಿನ ಮೇವರೆಗೆ 8,546 ಪ್ರಕರಣಗಳಲ್ಲಿ ಕಾನೂನಿನ ನೆರವು ನೀಡಲಾಗಿದೆ. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 1,40,409 ಪ್ರಕರಣಗಳಲ್ಲಿ ಅಸಹಾಯಕರಿಗೆ ನೆರವಾಗಿದೆ. ಜತೆಗೆ ಇದೇ ಅವಧಿಯಲ್ಲಿ 34,49 ಕೋಟಿ ರೂ. ವಿನಿಯೋಗಿಸಿದೆ.

ಯಾರು ಅರ್ಹರು?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದವರು, ಮಹಿಳೆಯರು ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ, ಕೈಗಾರಿಕಾ ವಿನಾಶ ಸೇರಿ ವಿವಿಧ ಸಮಸ್ಯೆಗಳಿಗೆ ತುತ್ತಾದದವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನತೆ ಹೊಂದಿರುವವರು, ಜೀತಕ್ಕೊಳಗಾದವರು ಮತ್ತು ವಾರ್ಷಿಕ 3 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಎಲ್ಲ ವರ್ಗದ ಜಾತಿಯ ಜನರು ಈ ಪ್ರಾಧಿಕಾರದಡಿಯಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದು.

ಜಾಗೃತಿ ಕಾರ್ಯಕ್ರಮ
ಉಚಿತ ಕಾನೂನು ಸೇವೆ, ಸಲಹೆ, ರಾಜೀ ಸಂಧಾನ ಹಾಗೂ ಜನತಾ ನ್ಯಾಯಾಲಯ ಶಿಬಿರಗಳನ್ನು ಆಯೋಜಿಸುವುದು. ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸೇವೆಗಳನ್ನು ಜನತೆ ಪಡೆದುಕೊಳ್ಳಬಹುದಾಗಿದೆ. ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ, ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆ, ವ್ಯಾಜ್ಯ ಪೂರ್ವ ಸಮಸ್ಯೆಗಳ ಪರಿಹಾರ, ಕಾನೂನು ಸಾಕ್ಷರತೆ ನೀಡುವುದು ಪ್ರಾಧಿಕಾರದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ.

ಕಿರುಪುಸ್ತಕಗಳ ವಿತರಣೆ
ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು, ಕಾನೂನು ಸೇವಾ ಪ್ರಾಧಿಕಾರಗಳು ದೇಶಾದ್ಯಂತ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಮಕ್ಕಳು, ಕಾರ್ಮಿಕರು, ವಿಪತ್ತಿನ ಸಂತ್ರಸ್ತರು, ಎಸ್‌ಸಿ ಮತ್ತು ಎಸ್‌ಟಿ, ವಿಕಲಚೇತನರು ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳು ಮತ್ತು ಯೋಜನೆಗಳ ಕುರಿತು. ಜೊತೆಗೆ, ಕಾನೂನು ಸೇವೆಗಳ ಅಧಿಕಾರಿಗಳು ಜನರ ನಡುವೆ ವಿತರಿಸಲಾದ ವಿವಿಧ ಕಾನೂನುಗಳ ಬಗ್ಗೆ ಸುಲಭ ಭಾಷೆಯಲ್ಲಿ ಕಿರುಪುಸ್ತಕಗಳು ಮತ್ತು ಕರಪತ್ರಗಳನ್ನು ಸಿದ್ಧಪಡಿಸಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಶ್ರಮ
1987ರ ಸೆಕ್ಷನ್ 12ರ ಮೂಲಕ ಸೂಚಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಯು ಉಚಿತ ಕಾನೂನು ಸೇವೆ ಪಡೆಯಬಹುದು. ಈ ಅಧಿನಿಯಮದಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಈ ಪ್ರಾಧಿಕಾರಗಳು ಆಯಾ ಮಟ್ಟದಲ್ಲಿ ಜನರ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿವೆ.