ನ್ಯೂಸ್

"ಏನೇ ಆಗ್ಲಿ ಕರೆಂಟ್ ಬಿಲ್ ಕಟ್ಟಲ್ಲ" ಎಂದ ಮಹಿಳೆ; ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ ಫ್ರೀ ಕರೆಂಟ್​ ಬೇಡಿಕೆ!

ಕಲಬುರ್ಗಿ: ಕಾಂಗ್ರೆಸ್​ ಪಕ್ಷ, ಚುನಾವಣಾ ಪ್ರಣಾಳಿಕೆಯಲ್ಲಿ ಫ್ರೀ ಕರೆಂಟ್ ಕೊಡುವುದಾಗಿ ಭರವಸೆ ನೀಡಿದ್ದು ಮುಳುವಾಗುವ ಸಾಧ್ಯತೆ ಕಂಡುಬರುತ್ತಿದೆ. ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಗೆದ್ದು ಬಂದ ಮೇಲೆ ಅನೇಕ ಕಡೆಗಳಲ್ಲಿ ಜನರು ನಾವು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದೇ ಕುಳಿತಿದ್ದಾರೆ. ಕೆಲವರಂತೂ ಕರೆಂಟ್ ಬಿಲ್​ ನೀಡಲು ಬರುವ ರೀಡರ್​ರನ್ನು ಗ್ರಾಮದಿಂದಲೇ ಓಡಿಸಿದ್ದಾರೆ. ಅಲ್ಲಲ್ಲಿ ರೀಡರ್​ ಜತೆ ವಾಗ್ವಾದದ ಪ್ರಕರಣಗಳೂ ಕಂಡುಬಂದಿದೆ.

ಕರೆಂಟ್​ ಬಿಲ್ ಉಚಿತ, ಆದರೆ ಕಾಂಗ್ರೆಸ್ ಕೆಲ ಕಂಡೀಶನ್​ಗಳನ್ನು ಹಾಕಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಲು ಕಾರಣವಾಗಿದೆ. ಇದೀಗ ಕಲಬುರಗಿಯ ಒಂದು ಗ್ರಾಮದಲ್ಲಂತೂ, ಜೆಸ್ಕಾಂ ಅಧಿಕಾರಿಯ ಜತೆ ಮಹಿಳೆಯೊಬ್ಬರು ವಾಗ್ವಾದವೂ ಮಾಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್​ ಕೂಡ ಆಗುತ್ತಿದೆ. ಅಂದ ಹಾಗೆ ಜೆಸ್ಕಾಂ ಸಿಬ್ಬಂದಿಯೊಬ್ಬರು ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ಕನೆಕ್ಷನ್ ಕಟ್ ಮಾಡಲು ಬಂದಿದ್ದರು.

ಗ್ರಾಮದಲ್ಲಿ ಕರೆಂಟ್​ ಬಿಲ್​ ನೀಡಿ ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ವಯರ್ ಕನೆಕ್ಷನ್ ಕಟ್ ಮಾಡಲು ಬಂದ ಸಿಬ್ಬಂದಿಯೊಬ್ಬರ ಜತೆ ವಾಗ್ವಾದಕ್ಕಿಳಿದ ಮಹಿಳೆ, "ಕರೆಂಟ್ ಬಿಲ್ ಕಟ್ಟಂಗಿಲ್ರಿ‌ ಸರ್.. ಕಾಂಗ್ರೆಸ್ ಸರ್ಕಾರ್ ಎಲ್ಲಾ ಫ್ರೀ ಫ್ರೀ ಅಂದಾದಲ್ರಿ?" ಎಂದು ಪ್ರಶ್ನಿಸಿದ್ದು ಬಿಲ್ ಕಟ್ಟಮ್ಮ ಎಂದ ಜೆಸ್ಕಾಂ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಮಹಿಳೆ "ಯಾರು ಬಿಲ್ ಕಟ್ಟಂಗಿಲ್ಲ ಅಂತಾ ಹೇಳಿನೇ. ನಮ್ಮಿಂದ ಕಾಂಗ್ರೆಸ್ ವೋಟ್ ಹಾಕಿಸಿಕೊಂಡ್ರು. ಹಾಗಾದ್ರೆ ಕಾಂಗ್ರೆಸ್ ಹೇಳಿದ್ದು ಬೋಗಸ್ಸಾ? ಬಿಲ್ ಕಟ್ಟಲ್ಲ ಎಂದಿದ್ದಕ್ಕೆ ಕನೆಕ್ಷನ್ ಕಟ್ ಮಾಡಲು ಜೆಸ್ಕಾಂ ಸಿಬ್ಬಂದಿ ಮುಂದಾದಾಗ "ಅದು ಹೇಗೆ ಕಟ್ ಮಾಡ್ತಿರ ಕರೆಂಟ್ ಕನೆಕ್ಷನ್, ಜೂನ್‌ನಿಂದ ಕಾಂಗ್ರೆಸ್‌ನವರು ಕಟ್ಟಬೇಡಿ ಅಂದಾರ್. ಯಾರು ಬರ್ತಾರೋ ಬರ್ಲಿ.. ನಾವಂತು ಬಿಲ್ ಕಟ್ಟಂಗಿಲ್ಲ" ಎಂದು ಮಹಿಳೆ ಪಟ್ಟು ಹಿಡಿದು ಕುಳಿತಿದ್ದಾರೆ.

ಒಟ್ಟಿನಲ್ಲಿ ಪ್ರಣಾಳಿಕೆಯಲ್ಲಿ ಚುನಾವಣೆ ಗೆಲ್ಲಲು ಜನಪ್ರಿಯ ಯೋಜನೆಯನ್ನು ಕಾಂಗ್ರೆಸ್​ ಘೋಷಿಸಿದ್ದು ಅದೇ ಮುಳುವಾಗುವ ಸಾಧ್ಯತೆ ಕಂಡು ಬರುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಫ್ರೀ ಕರೆಂಟ್ ಭರವಸೆ ತೀವ್ರ ಕಗ್ಗಂಟಾಗಿದೆ.