ಬೆಂಗಳೂರು: ಪ್ರಧಾನಮಂತ್ರಿ ಮುದ್ರಾ ಸಾಲ ಕೊಡಿಸುವುದಾಗಿ ಮಹಿಳೆಗೆ ನಂಬಿಸಿ ಮೊದಲ ಕಂತು,ವಿಮೆ ನೆಪದಲ್ಲಿ 90 ಸಾವಿರ ರೂ. ಪಡೆದು ಸೈಬರ್ ಕಳ್ಳರು ಮೋಸ ಮಾಡಿದ್ದಾರೆ.
ಯಲಹಂಕದ ಆಳ್ಳಾಳಸಂದ್ರದ ಭಾಗ್ಯಮ್ಮ ವಂಚನೆಗೆ ಒಳಗಾದವರು. ಮೇ 31ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 2 ಲಕ್ಷ ರೂ. ಸಾಲ ಸಿಗಲಿದೆ. ಇದಕ್ಕೆ ಶೇ.2 ಬಡ್ಡಿ ದರ ಮತ್ತು ಶೇ.30 ಸಬ್ಸಿಡಿ ಸಿಗಲಿದ್ದು, ತಿಂಗಳಿಗೆ ಒಮ್ಮೆ ಕಂತು ಪಾವತಿ ಮಾಡುವ ಸೌಲಭ್ಯ ಇರುವುದಾಗಿ ಹೇಳಿದ್ದಾನೆ. ಇದಕ್ಕೆ ಮಹಿಳೆ ಒಪ್ಪಿದ್ದಾಗ ಸ್ವಲ್ಪ ದಿನಗಳ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಮೊದಲ ಮೂರು ತಿಂಗಳ ಸಾಲದ ಕಂತು 26,854 ರೂ. ಪಾವತಿ ಮಾಡಬೇಕೆಂದು ವಸೂಲಿ ಮಾಡಿದ್ದ.
ಮತ್ತೆ ಕೆಲ ದಿನ ಬಿಟ್ಟು ಸಾಲಕ್ಕೆ ವಿಮೆ ಎಂದು ಹೇಳಿ ಮತ್ತೆ 13 ಸಾವಿರ ರೂ. ಪಡೆದು ಸಾಲ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸಬೂಬು ಹೇಳಿ ಮುಂದೂಡಿದ್ದ. ಸಾಲ ಬಂದಿಲ್ಲ ಎಂದು ಮಹಿಳೆ ಕರೆ ಮಾಡಿ ಕೇಳಿದಾಗ ಅಪರಿಚಿತ ವ್ಯಕ್ತಿ, ನಿಮ್ಮ ಬ್ಯಾಂಕ್ ಖಾತೆ ಸ್ಥಗಿತವಾಗಿದೆ. ಅದನ್ನು ಆಕ್ಟೀವ್ ಮಾಡಲು 17,500 ರೂ. ಪಾವತಿ ಮಾಡಬೇಕೆಂದು ಹೇಳಿ ಪಡೆದಿದ್ದ. ಇದೇ ರೀತಿಯಾಗಿ ಒಟ್ಟಾರೆ 90 ಸಾವಿರ ರೂ. ಪಡೆದು ಸಾಲ ಕೊಡಿಸದೆ ವಂಚನೆ ಮಾಡಿದ ಅಪರಿಚಿತ ವ್ಯಕ್ತಿ, ಮೊಬೈಲ್ ಆ್ ಮಾಡಿಕೊಂಡಿದ್ದಾನೆ. ಇದರಿಂದ ನೊಂದ ಮಹಿಳೆ, ಈಶಾನ್ಯ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.