ನ್ಯೂಸ್

ನೌಕರಿ ಆಮಿಷವೊಡ್ಡಿ ವ್ಯಕ್ತಿಗೆ ವಂಚನೆ

ಬೆಂಗಳೂರು: ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಲಿ. ನಲ್ಲಿ ಗ್ರೂಪ್ ಎ ದರ್ಜೆ ನೌಕರಿ ಕೊಡಿಸುವುದಾಗಿ ಇಂಜಿನಿಯರ್ ಪದವಿಧರನಿಗೆ ಆಮಿಷವೊಡ್ಡಿ 6.71 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.

ವೈಟ್‌ಫೀಲ್ಡ್‌ನ ಚನ್ನಸಂದ್ರ ನಿವಾಸಿ ಎಸ್.ಕೆ.ರಾಜಶೇಖರ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಯಲಹಂಕದ ಅನಂತಪುರ ನಿವಾಸಿ ಎಂ.ಪ್ರತಾಪ್ ಎಂಬಾತನ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಲಿ. ನಲ್ಲಿ ಗ್ರೂಪ್ ಎ ದರ್ಜೆಯ 9 ವ್ಯವಸ್ಥಾಪಕ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಕರೆಯಲಾಗಿದ್ದು, ರಾಜಶೇಖರ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ವಿಕಾಸಸೌಧದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದಾಗಿ ಪ್ರತಾಪ್, ಪರಿಚಯ ಮಾಡಿಕೊಂಡಿದ್ದ.

ಜ.1ರಂದು ಮತ್ತೆ ಕರೆ ಮಾಡಿ ನಿನ್ನ ಹೆಸರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇರುವುದಾಗಿ ಕಳುಹಿಸಿ ನಂಬಿಸಿದ್ದ. ಸ್ವಲ್ಪ ಹಣ ಕೊಟ್ಟರೇ ನೇಮಕಾತಿ ಖಾಯಂ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ 6.71 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ. ಈ ಕುರಿತು ರಾಜಶೇಖರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.