| ಕೀರ್ತಿನಾರಾಯಣ ಸಿ. ಬೆಂಗಳೂರು
ಸುಪ್ರೀಂಕೋರ್ಟ್ನ ಅಧಿಕೃತ ವೆಬ್ಸೈಟ್ ಹೋಲುವಂತೆ ನಕಲಿ ವೆಬ್ಸೈಟ್ ಸೃಷ್ಟಿಸಿ ದಾವೆದಾರರು ಹಾಗೂ ವಕೀಲರ ವೈಯಕ್ತಿಕ ಮಾಹಿತಿಗೆ ಕನ್ನಹಾಕಲು ಯತ್ನಿಸಿರುವ ಪ್ರಕರಣದ ಬೆನ್ನಲ್ಲೇ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಜಾಲತಾಣ ನಕಲು ಮಾಡಿ ಸೃಷ್ಟಿಯಾಗಿರುವ ‘ನಕಲಿ ವೆಬ್ಸೈಟ್’ಗಳ ಹಾವಳಿ ಮಿತಿಮೀರುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಸೈಬರ್ ಕ್ರೖೆಂ ಪೊಲೀಸರ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವ ಅಮಾಯಕರ ಸಂಖ್ಯೆ ಏರುತ್ತಲೇ ಇದೆ.
ಆನ್ಲೈನ್ ಶಾಪಿಂಗ್, ಉದ್ಯೋಗ ಆಮಿಷ, ಕೌಶಲ ತರಬೇತಿ, ಆದಾಯ ತೆರಿಗೆ, ಸಾಲ, ಬಿಟ್ ಕಾಯಿನ್ ವ್ಯವಹಾರ, ಷೇರು ವ್ಯವಹಾರ ಹೀಗೆ ತರಹೇವಾರಿ ವೆಬ್ಸೈಟ್ಗಳನ್ನು ಸೃಷ್ಟಿಸುವ ಮುಖೇನ ಹಣ ಕಟ್ಟಿಸಿಕೊಂಡು ಜನರನ್ನು ವಂಚನೆ ಮಾಡಲಾಗುತ್ತಿದೆ. ಎನ್ಸಿಆರ್ಬಿ ವರದಿ ಪ್ರಕಾರ 3 ವರ್ಷದಲ್ಲಿ ದೇಶದಲ್ಲಿ 30,631 ವಂಚನೆ ಪ್ರಕರಣಗಳು ದಾಖಲಾಗಿವೆ. ಸಾವಿರಾರು
ಕೋಟಿ ರೂ. ಹಣವನ್ನು ಸೈಬರ್ ವಂಚಕರು ದೋಚಿದ್ದು, ಆ ಪೈಕಿ 570 ಕೋಟಿ ರೂ. ಮೊತ್ತವನ್ನು ಪೊಲೀಸರು ಜಪ್ತಿ ಮಾಡಿ ವಾಪಸ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಜನಪ್ರಿಯತೆ ಪಡೆದಿರುವ ಬ್ರ್ಯಾಂಡ್ ಅಥವಾ ಕಂಪನಿಗಳಿಗೆ ಹೋಲುವಂತೆ ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿ ವಂಚನೆ ಮಾಡಲಾಗುತ್ತಿದೆ.
ಉದಾಹರಣೆಗೆ ಡಿ ಮಾರ್ಟ್, ಬಿಗ್ ಬಜಾರ್, ಬಿಗ್ ಬಾಸ್ಕೆಟ್, ರಿಲಯನ್ಸ್ನಂತಹ ಪ್ರತಿಷ್ಠಿತ ಕಂಪನಿಗಳ ವೆಬ್ಸೈಟ್ ಹೋಲುವಂತೆ ನಕಲು ಮಾಡಿ ಗ್ರಾಹಕರು ಖರೀದಿಸುವ ಉತ್ಪನ್ನಕ್ಕೆ ಆನ್ಲೈನ್ನಲ್ಲೇ ಹಣ ಪಾವತಿಸಿಕೊಂಡು ಉತ್ಪನ್ನ ಕಳುಹಿಸದೆ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಮತ್ತು ರಾಜ್ಯಗಳ ಸಾರ್ವಜನಿಕ ಸೇವಾ ವೆಬ್ಸೈಟ್ಗಳ ಹೆಸರಲ್ಲೂ ಮೋಸ ಮಾಡಲಾಗುತ್ತಿದೆ.
ತಿರುಪತಿ ದರ್ಶನದ ಹೆಸರಲ್ಲೂ ಮೋಸ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಕೊಡುವ ನೆಪದಲ್ಲಿ ಹಲವಾರು ನಕಲಿ ವೆಬ್ಸೈಟ್ಗಳು ಸೃಷ್ಟಿಯಾಗಿವೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಹೆಚ್ಚಿನವರು ಟಿಕೆಟ್ಗಾಗಿ ಹಣ ಪಾವತಿಸಿ ಮೋಸ ಹೋಗಿದ್ದಾರೆ. ಪೊಲೀಸರು ಈವರೆಗೆ 41ಕ್ಕೂ ಅಧಿಕ ನಕಲಿ ವೆಬ್ಸೈಟ್ಗಳನ್ನು ಸ್ಥಗಿತಗೊಳಿಸಿದ್ದಾರೆ. ವಿಐಪಿ ದರ್ಶನ ಕಲ್ಪಿಸುವುದಾಗಿ ಹಣ ಪಡೆದು ವಂಚಿಸಲಾಗುತ್ತಿತ್ತು. ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗ್ಯಾಂಗ್ಗಳು ಇದರಲ್ಲಿರುವ ಬಗ್ಗೆ ಸೈಬರ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಮೇಲೂ ಕಣ್ಣು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಲಾಗಿತ್ತು. ’http://rojgarsevak.org’ ಅಸಲಿ ವೆಬ್ಸೈಟ್ ಅಲ್ಲ ಇದು ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಗೊತ್ತಾಗಿದೆ. https://nrega.nic.in ಇದೊಂದೆ ಅಧಿಕೃತ ವೆಬ್ಸೈಟ್ ಎಂದು ಸ್ಪಷ್ಟಪಡಿಸಿದೆ.
- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ವೆಬ್ಸೈಟ್ ಹೌದೋ ಅಲ್ಲವೋ ಎಂಬುದನ್ನು ಪರಿಶೀಲಿಸಿ ನಂತರ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಿ.
- ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವಾಗ, ಶುಲ್ಕ ರೂಪದಲ್ಲಿ ಹಣ ಪಾವತಿಸುವಾಗ ಆ ವೆಬ್ಸೈಟ್ನ ಅಸಲೀತನ ಪರಿಶೀಲಿಸಿ.
- ಮೊಬೈಲ್, ಶೂ, ಬಟ್ಟೆ, ಚರ್ಮದ ಪರಿಕರ, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಸೇರಿ ದುಬಾರಿ ಬೆಲೆಯ ಉತ್ಪನ್ನಗಳ ಮೇಲೆ ಹೆಚ್ಚು ರಿಯಾಯಿತಿ ಘೋಷಣೆ ನಂಬಬೇಡಿ.
- ಶಾಪಿಂಗ್ ಪೋರ್ಟಲ್ನ ಅಸಲಿತನದ ಬಗ್ಗೆ ಇಂಟರ್ನೆಟ್ನಲ್ಲಿ ಪರಿಶೀಲಿಸಿ. ಉತ್ಪನ್ನಗಳ ವಿತರಣೆಯ ಬಗ್ಗೆ ಹೆಚ್ಚು ದೂರುಗಳ ರಿವ್ಯೂ ಇದ್ದರೆ ನಂಬಬೇಡಿ.
- ಕ್ಯಾಶ್-ಆನ್ ಡೆಲಿವರಿ ಇದ್ದರಷ್ಟೇ ಉತ್ಪನ್ನ ಬುಕ್ ಮಾಡಿ. ಡೆಲಿವರಿ ಬಂದ ನಂತರ ಅದನ್ನು ತೆರೆದು ನೀವು ಬುಕ್ ಮಾಡಿದ ಉತ್ಪನ್ನ ಇದೆಯೇ ಎಂದು ಪರಿಶೀಲಿಸಿ ನಂತರ ಹಣ ಕೊಡಿ.
- ಉತ್ಪನ್ನ ಕೊಡದೆ ವಂಚಿಸುವ ಜತೆಗೆ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಡಾರ್ಕ್ವೆಬ್ನಲ್ಲಿ ಮಾರುವ ಸಾಧ್ಯತೆ ಇದೆ. ಲಿಂಕ್ ಪರಿಶೀಲಿಸಿದ ನಂತರವೇ ಹಣ ಪಾವತಿಸಿ.
ತಕ್ಷಣ 1930ಗೆ ಕರೆ ಮಾಡಿ: ಸೈಬರ್ ಅಪರಾಧಕ್ಕೆ ತುತ್ತಾಗಿರುವುದು ಗೊತ್ತಾದ ತಕ್ಷಣ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ. ಕರೆ ಉಚಿತವಾಗಿದ್ದು, ಸ್ಥಳೀಯ ಭಾಷೆಯಲ್ಲೇ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿ, ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ಮಾರ್ಗದರ್ಶನ ನೀಡುತ್ತಾರೆ.
ಕೆಪಿಸಿಸಿ ಹೆಸರಲ್ಲೂ ನಕಲಿ ವೆಬ್ಸೈಟ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಕೆಲವೇ ದಿನಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವೆಟ್ ಫ್ಯಾಬ್ ಟೆಕ್ನಾಲಿಜಿಸ್ ಪ್ರೖೆವೇಟ್ ಲಿಮಿಟೆಡ್ನ ನಿರ್ದೇಶಕರಾದ ಧರಣೇಶ್ ಜೈನ್, ಅರುಣ್, ಸಿದ್ಧಾರ್ಥ್ ಮತ್ತು ಉದ್ಯೋಗಿ ವೆಂಕಟೇಶ್ ಎಂಬುವರು ಕೃತ್ಯ ಎಸಗಿದ್ದರು. ಪಕ್ಷದ ನಾಯಕರಿಗೆ ಅಗೌರವ ತರುವಂತಹ ಹೇಳಿಕೆಗಳನ್ನು ಪ್ರಕಟಿಸುವ ಉದ್ದೇಶ ಹೊಂದಿದ್ದರು.
ಸರ್ಕಾರಿ ವೆಬ್ಸೈಟ್ಗಳಿಗೆ ಹೋಲುವಂತೆ ನಕಲಿ ವೆಬ್ಸೈಟ್ ಸೃಷ್ಟಿಸಲಾಗುತ್ತದೆ. ಇದರಲ್ಲಿ ಜನರ ವೈಯಕ್ತಿಕ ಮಾಹಿತಿಯನ್ನಷ್ಟೇ ಕದಿಯಲಾಗುತ್ತದೆ. ಆನ್ಲೈನ್ ಶಾಪಿಂಗ್ನಂತಹ ಬೇರೆ ನಕಲಿ ವೆಬ್ಸೈಟ್ಗಳಲ್ಲಿ ಹಣ ಲಪಟಾಯಿಸಲಾಗುತ್ತದೆ. ಆದ್ದರಿಂದ ಯಾವುದೇ ವೆಬ್ಸೈಟ್ನಲ್ಲಿ ವ್ಯವಹರಿಸುವ ಮುನ್ನ ಅದರ ನೈಜತೆ ಬಗ್ಗೆ ಪರಿಶೀಲಿಸಬೇಕು. ವಾಟ್ಸ್ಆಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್ಗಳನ್ನು ತೆರೆಯಬೇಡಿ. ಇತ್ತೀಚೆಗೆ ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಲಾಗಿತ್ತು. | ಡಾ.ಎಸ್.ಡಿ.ಶರಣಪ್ಪ, ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬೆಂಗಳೂರು
ಪಾಸ್ಪೋರ್ಟ್ ಸೇವೆ ಹೆಸರಲ್ಲಿ ಮೋಸ!: ಕಳೆದ ತಿಂಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿ ಪಾಸ್ಪೋರ್ಟ್ ಸೇವೆ ಪಡೆಯಲು ಗೊತ್ತುಪಡಿಸಿದ ವೆಬ್ಸೈಟ್ ಹೋಲುವಂತೆ ನಕಲಿ ವೆಬ್ಸೈಟ್ ತೆರೆದು ವೈಯಕ್ತಿಕ ಮಾಹಿತಿ ಕದಿಯಲು ಯತ್ನ ನಡೆದಿತ್ತು. ಈ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. http://www.passportindia.gov.in ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು, ಇಲ್ಲೇ ಸೇವೆ ಪಡೆಯಲು ಸೂಚಿಸಿದೆ. http://www.indiapassport.org, http://www.online-passportindia.com, http://www.passportindiaportal.in ವೆಬ್ಸೈಟ್ಗಳು ನಕಲಿ ಎಂದು ಘೋಷಿಸಿದೆ.