ನ್ಯೂಸ್

ವಿದ್ಯಾರ್ಥಿಗಳ ಹೆಸರಿನಲ್ಲಿ ಖಾತೆ ತೆರೆದು ವಂಚನೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಕಮಿಷನ್ ಆಸೆ ತೋರಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಕ್ರೈಂಗೆ ಬಳಸುತ್ತಿದ್ದ ನಾಲ್ವರನ್ನು ಆಗ್ನೇಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅಭಯ್ದಾನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18) ಮತ್ತು ಸವಾಯಿ ಸಿಂಗ್ (21) ಬಂಧಿತರು. ಸೆ.6ರಂದು ವ್ಯಕ್ತಿಯೊಬ್ಬರಿಗೆ ಅರೆಕಾಲಿಕ ನೌಕರಿ ಅಮಿಷವೊಡ್ಡಿ 12.43 ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಪಿ ಡಾ. ಗೋವರ್ಧನ್ ಗೋಪಾಲ್ ಮತ್ತು ಇನ್‌ಸ್ಪೆಕ್ಟರ್ ಪಿ.ಎನ್. ಈಶ್ವರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು ಪರಿಚಿತ ರಾಜಸ್ಥಾನ ಮೂಲದ ವಿದ್ಯಾರ್ಥಿಗಳ ಜತೆಗೆ ಪೇಯಿಂಗ್ ಗೆಸ್ಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಇರುತ್ತಿದ್ದ ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಸೇರಿ ಅನ್ಯ ರಾಜ್ಯದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಆರಂಭದಲ್ಲಿ ಅವರಿಗೆ ಊಟ, ತಿಂಡಿ, ಪಾರ್ಟಿ ಕೊಟ್ಟು ಅವರೊಂದಿಗೆ ವಿಶ್ವಾಸ ಗಳಿಸಿಕೊಳ್ಳುತ್ತಿದ್ದರು. ಬಳಿಕ ಟ್ರೇಡಿಂಗ್ ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದೇವೆ. ಅದಕ್ಕಾಗಿ ಸಾಕಷ್ಟು ಬ್ಯಾಂಕ್ ಖಾತೆಗಳು ಬೇಕಿದ್ದು, ಸಹಾಯ ಮಾಡಿದರೆ ನಮಗೆ ಸಿಗುವ ಕಮಿಷನ್‌ನಲ್ಲಿ ನಿಮಗೂ ಕೊಡುವುದಾಗಿ ನಂಬಿಸಿದ್ದರು.

ವಿದ್ಯಾರ್ಥಿಗಳು ಖರ್ಚಿಗೆ ಒಂದಿಷ್ಟು ಹಣ ಸಿಗಲಿದೆ ಎಂಬ ಆಸೆಯಿಂದ ತಮ್ಮ ದಾಖಲೆ ಪತ್ರಗಳನ್ನು ಕೊಟ್ಟು ಬ್ಯಾಂಕ್‌ನಲ್ಲಿ ಖಾತೆ ತೆರೆಯುತ್ತಿದ್ದರು. ಇದಾದ ಮೇಲೆ ಆರೋಪಿಗಳು, ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಯ ಪಾಸ್‌ಬುಕ್, ಚೆಕ್‌ಬುಕ್, ಎಟಿಎಂ ಕಾರ್ಡ್‌ಗಳನ್ನು ಪಡೆದು ರಾಜಸ್ಥಾನಕ್ಕೆ ಹೋಗಿ ಸೈಬರ್ ಕ್ರೈಂಗೆ ಬಳಸುತ್ತಿದ್ದರು.

ಅಂದರೆ, ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಆನ್‌ಲೈನ್‌ನಲ್ಲಿ ರೇಟಿಂಗ್ ನೀಡುವ ಪಾರ್ಟ್ ಟೈಂ ಕೆಲಸ ಮಾಡಿದರೆ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಆರಂಭದಲ್ಲಿ ಲಾಭಾಂಶ ತೋರಿಸಿ ಬಳಿಕ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಂತೆ ಪುಸಲಾಯಿಸಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

ಇದಲ್ಲದೆ, ಅರೆಕಾಲಿಕ ನೌಕರಿ ಕೊಡಿಸುವುದಾಗಿ, ಡಿಜಿಟಲ್ ಆರೆಸ್ಟ್ ಸೇರಿ ವಿವಿಧ ಮಾದರಿ ಸೈಬರ್ ಕ್ರೈಂಗಳಲ್ಲಿ ಅಮಾಯಕರಿಂದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿಕೊಳ್ಳುತ್ತಿದ್ದರು. ಇದಾದ ಮೇಲೆ ವಿತ್ ಡ್ರಾ ಮಾಡುವುದು, ಬೇರೆ ಖಾತೆಗೆ ವರ್ಗಾವಣೆ, ಬಿನಾನ್ಸ್ ಪ್ಲಾಟ್ ಾರಂ ಮುಖಾಂತರ ಕ್ರಿಪ್ಟೋ ಕರೆನ್ಸಿ ಖರೀದಿ ಡಿಜಿಟಲ್ ವಾಲೆಟ್‌ಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು.

ಇದೇ ರೀತಿ ಅರೆಕಾಲಿನ ನೌಕರಿ ಆಮಿಷವೊಡ್ಡಿ 12.43 ಲಕ್ಷ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಬ್ಯಾಂಕ್ ಖಾತೆದಾರನ್ನು ಪತ್ತೆ ಮಾಡಿದಾಗ ವಿದ್ಯಾರ್ಥಿ ಎಂಬುದು ಗೊತ್ತಾಯಿತು. ಆತನನ್ನು ವಿಚಾರಣೆ ನಡೆಸಿದಾಗ 15 ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ. ಈತ ಕೊಟ್ಟ ಸುಳಿವಿನ ಮೇರೆಗೆ ಮೂವರನ್ನು ರಾಜಸ್ಥಾನದ ಉದಯ್ಪುರದಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯ ಪೇಯಿಂಗ್ ಗೆಸ್ಟ್‌ನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

34 ಪಾಸ್‌ಬುಕ್, 106 ಕಾರ್ಡ್ ಜಪ್ತಿ

19 ಮೊಬೈಲ್ಗಳು, 2 ಲ್ಯಾಪ್‌ಟಾಪ್, 20 ಸಿಮ್ಕಾರ್ಡ್‌ಗಳು, ವಿದ್ಯಾರ್ಥಿಗಳಿಂದ ತೆರೆಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್‌ಬುಕ್, 106 ಕ್ರೆಡಿಟ್/ಡೆಬಿಟ್ ಕಾರ್ಡ್, 39 ಬ್ಯಾಂಕ್ ಚೆಕ್‌ಬುಕ್‌ಗಳು ಹಾಗೂ 75 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ನಯಾಪೈಸೆ ಸಿಕ್ಕಿರಲಿಲ್ಲ

ಸೈಬರ್ ವಂಚಕರ ಬಲೆಗೆ ಸಿಲುಕಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿ, 15 ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಟ್ಟಿದ್ದ. ಮೊದಲು ಕಮಿಷನ್ ಕೊಡುವುದಾಗಿ ಹೇಳಿದ್ದ ಆರೋಪಿಗಳು ಈತನಿಗೆ ನಯಾಪೈಸೆ ಕೊಟ್ಟಿರಲಿಲ್ಲ. ಕೇವಲ ಪಿಜಿಯಲ್ಲಿ ಇದ್ದಾಗ ಊಟ, ತಿಂಡಿ ಕೊಡಿಸಿಕೊಂಡು ಪುಸಲಾಯಿಸಿದ್ದರು. ವಿದ್ಯಾರ್ಥಿ ಸಹ, ಅಸಲಿ ಟ್ರೇಡಿಂಗ್ ಮತ್ತು ಕಿೆರ‌್ಟೃ ಕರೆನ್ಸಿ ವ್ಯವಹಾರ ಇರಬೇಕೆಂದು ಬ್ಯಾಂಕ್ ಖಾತೆ ತೆರೆದುಕೊಂಡಿದ್ದ.