ಬೆಂಗಳೂರು: ಕ್ರಿಕೆಟ್ ಟೂರ್ನಿಗಳಲ್ಲಿ ಆಟವಾಡಲು ಅವಕಾಶ ಕೊಡಿಸುವುದಾಗಿ ಯುವ ಕ್ರಿಕೆಟಿಗನ ಪಾಲಕರಿಂದ ೧೨.೨೩ ಲಕ್ಷ ರೂ. ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಖಾಸಗಿ ಕ್ರಿಕೆಟ್ ಅಕಾಡೆಮಿಯ ತರಬೇತುದಾರನ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಜಾಜಿನಗರ ೫ನೇ ಬ್ಲಾಕ್ ನಿವಾಸಿ ಶಾಮ್‌ಪ್ರಸಾದ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಗಾಂಧಿನಗರದ ರೋರ್ ಕ್ರಿಕೆಟ್ ಅಕಾಡೆಮಿ ತರಬೇತುದಾರ ಗೌರವ್ ಧೀಮಾನ್ ವಿರುದ್ಧ ವಂಚನೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಶಾಮ್‌ಪ್ರಸಾದ್ ಶೆಟ್ಟಿ ಅವರ ಪುತ್ರ ಆಯುಷ್ ಪೂರ್ಣಚಂದ್ರ ಶೆಟ್ಟಿ(೨೩) ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್(ಕೆಎಸ್‌ಸಿಎ) ನಡೆಸುವ ಪ್ರಥಮ ದರ್ಜೆ ಕ್ರಿಕೆಟ್ ಲೀಗ್ ಸಂಬಂಧ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಈ ಟೂರ್ನಿಯಲ್ಲಿ ಉತ್ತಮ ರನ್ ಗಳಿಸಿದ ಪರಿಣಾಮ ಮಿರ್ಜಾ ಇಸ್ಮಾಯಿಲ್ ಅಂಡರ್-೨೩ ವಲಯ ಮಟ್ಟದ ಟೂರ್ನಿಗೆ ಅವಕಾಶ ಪಡೆದಿದ್ದರು. ಈ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಸರಿಯಾಗಿ ರನ್ ಗಳಿಸದ ಪರಿಣಾಮ ಉಳಿದ ಮೂರು ಪಂದ್ಯಗಳಿಗೆ ಅವಕಾಶ ನೀಡಿರಲಿಲ್ಲ. ನಂತರ ಆಯುಷ್ ಪೂರ್ಣಚಂದ್ರ ಶೆಟ್ಟಿ ಗಾಂಧಿನಗರದ ಶೇಷಾದ್ರಿ ರಸ್ತೆಯಲ್ಲಿರುವ ರೋರ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಗೆ ಸೇರಿಕೊಂಡಿದ್ದರು. ಅಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಗೌರವ್ ಪರಿಚಯವಾಗಿದೆ. ಬಳಿಕ ಆಯುಷ್ ಜತೆಗೆ ಮನೆಗೆ ಬಂದಿದ್ದ ಗೌರವ್, ದೂರದಾರ ಶಾಮ್‌ಪ್ರಸಾದ್ ಶೆಟ್ಟಿ ಅವರನ್ನು ಪರಿಚಯಿಸಿಕೊಂಡಿದ್ದಾರೆ.
ಅವಕಾಶ ಕೊಡಿಸುವ ಆಮೀಷವೊಡ್ಡಿ ವಂಚನೆ:
ಬಳಿಕ ಕೆಎಸ್‌ಸಿಎ ಅಧ್ಯಕ್ಷ ಬ್ರಿಜೇಶ್ ಪಟೇಲ್‌ಗೆ ಸೇರಿದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ನ ವ್ಯವಸ್ಥಾಪಕರು ಮುಂದೆ ನಡೆಯುವ ಎರಡು ದಿನದ ಪ್ರಥಮ ದರ್ಜೆ ಲೀಗ್ ಸರ್.ಮಿರ್ಜಾ ಇಸ್ಮಾಯಿಲ್ ಟ್ರೋಫಿ, ಟಿ-೨೦ ಮಾದರಿಯ ಕಸ್ತೂರಿ ರಂಗನ್ ಮೆಮೋರಿಯಲ್ ಟ್ರೋಫಿ, ೫೦ ಓವರನ್‌ನ ಏಕದಿನ ಪಂದ್ಯ ವೈ.ಎಸ್.ರಾಮಯ್ಯ ಮೆಮೋರಿಯಲ್ ಟ್ರೋಫಿ ಟೂರ್ನಮೆಂಟ್‌ಗಳಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ. ಈ ಟೂರ್ನಿ ಹಾಗೂ ಪ್ರಮುಖವಾಗಿ ಎಸ್.ಎ.ಶ್ರೀನಿವಾಸ ಮೆಮೋರಿಯಲ್ ಟ್ರೋಫಿ ಅಂಡರ್-೨೩ ವಲಯ ಮಟ್ಟದ ಪಂದ್ಯಾವಳಿಗೆ ನಿಮ್ಮ ಮಗನಿಗೆ ಆರಂಭಿಕ ಆಟಗಾರನಾಗಿ ಅವಕಾಶ ಕೊಡಿಸುವುದಾಗಿ ಆಮೀಷವೊಡ್ಡಿದ್ದರು.
ಟೂರ್ನಿಗಳಲ್ಲಿ ಅವಕಾಶ ಕೊಡಿಸದೆ ವಂಚನೆ:
೨೦೨೨-೨೩ನೇ ಸಾಲಿನಲ್ಲಿ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಪರ ಆಡದಂತೆ ಆಯುಷ್‌ಗೆ ತಿಳಿಸಿದ್ದ. ಮುಂಬರುವ ಟೂರ್ನಿಗಳಿಗೆ ಅವಕಾಶ ಕೊಡಿಸುವುದಾಗಿ ಹಾಗೂ ಒಳ್ಳೆಯ ಬ್ಯಾಟ್‌ಗಳನ್ನು ಹಾಗೂ ತರಬೇತಿ ಕೊಡಿಸುವುದಾಗಿ ಆಯುಷ್ ತಂದೆಯಿಂದ ಹಂತ ಹಂತವಾಗಿ ೧೨.೨೩ ಲಕ್ಷ ರೂ. ಪಡೆದಿದ್ದಾರೆ. ಬಳಿಕ ಯಾವುದೇ ಟೂರ್ನಿಗಳಲ್ಲಿ ಅವಕಾಶ ಕೊಡಿಸದೆ, ಕ್ರಿಕೆಟ್ ಸಾಮಾಗ್ರಿಗಳನ್ನು ಕೊಡಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.