ಬೆಂಗಳೂರು: ಸಾಲದ ಕಂತು ಪಾವತಿಸುವ ನೆಪದಲ್ಲಿ ಕಾರು ಬಾಡಿಗೆ ಪಡೆದು ಬಳಿಕ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಎನ್. ಶ್ರೀನಿವಾಸ್ (35) ಬಂಧಿತ. 90 ಲಕ್ಷ ರೂ. ಮೌಲ್ಯದ ಒಂಬತ್ತು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024ರ ಎಲ್‌ಎಕ್ಸ್ ಇನ್ನಿತ್ತರ ಜಾಲತಾಣದಲ್ಲಿ ಕಾರು ಬಾಡಿಗೆಗೆ ಇವೆ ಅಥವಾ ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕುವ ವ್ಯಕ್ತಿಗಳನ್ನು ಸಂಪರ್ಕ ಮಾಡುತ್ತಿದ್ದ. ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದೆ ಇರುವ ವ್ಯಕ್ತಿಗಳಿಗೆ ನಾನು ಬಾಡಿಗೆ ಓಡಿಸಿಕೊಂಡು ಸಾಲದ ಹಣ ಪಾವತಿ ಮಾಡುತ್ತೇನೆ ಎಂದು ನಂಬಿಸುತ್ತಿದ್ದ.
ಅವರ ಬಳಿ ಇರುವ ಕಾರುಗಳ ಆರ್‌ಸಿ ಬುಕ್, ವಿಮಾ ಪಾಲಿಸಿ ಇನ್ನಿತ್ತರ ದಾಖಲೆಗಳನ್ನು ಮೊಬೈಲ್‌ನಲ್ಲಿ ೆಟೋ ತೆಗೆದುಕೊಂಡು ಬಂದು ಆನಂತರ ಎಡಿಟ್ ಮಾಡಿ ತನ್ನ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ಜಿಪಿಎಸ್ ಡಿವೈಸ್‌ನ್ನು ತೆಗೆದು ಪರಿಚಯಿ ಇರುವ ವ್ಯಕ್ತಿಗಳ ಮೂಲಕ ಕೈಸಾಲ ಕೊಡುವ ವ್ಯಕ್ತಿಗಳ ಬಳಿ ಕಾರು ಅಡಮಾನ ಇಟ್ಟು 50 ಸಾವಿರದಿಂದ 1 ಲಕ್ಷ ರೂ. ಸಾಲ ಪಡೆಯುತ್ತಿದ್ದ. ಆದರೆ, ಕಾರಿನ ಮೇಲಿನ ಸಾಲದ ಕತ್ತುನ್ನು ಪಾವತಿ ಮಾಡುತ್ತಿರಲಿಲ್ಲ.
ಮೂರ‌್ನಾಲ್ಕು ತಿಂಗಳು ಸುಮ್ಮನಾಗಿದ್ದು, ಬ್ಯಾಂಕ್‌ನಿಂದ ನೋಟಿಸ್ ಬಂದ ಮೇಲೆ ಕಾರು ಮಾಲೀಕರು, ಶ್ರೀನಿವಾಸ್‌ನ್ನು ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದರು. ಅಷ್ಟೊತ್ತಿಗೆ ಆರೋಪಿ, ಮೊಬೈಲ್ ನಂಬರ್ ಬದಲಾಯಿಸಿಕೊಂಡು ಓಡಾಡುತ್ತಿದ್ದ.
ಇದಾದ ಮೇಲೆ ಮತ್ತೊಬ್ಬ ಕಾರು ಮಾಲೀಕನನ್ನು ಹುಡುಕಾಟ ನಡೆಸಿ ಆತನಿಗೆ ಗಾಳ ಎಸೆದು ಕಾರು ಬಾಡಿಗೆ ಪಡೆದು ಆತನಿಗೂ ಮೋಸ ಮಾಡುತ್ತಿದ್ದ. ಈ ಬಗ್ಗೆ ಮಾ.25ರಂದು ಕಾರು ಮಾಲೀಕನೊಬ್ಬ ಹುಳಿಮಾವು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದ ತಂಡ ಆರೋಪಿಯ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗದಲ್ಲಿ ಶ್ರೀನಿವಾಸ್‌ನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ವಿಚಾರಣೆ ವೇಳೆ 3 ಕಾರುಗಳನ್ನು ಅಡಮಾನ ಇಟ್ಟಿದ್ದು ಮತ್ತು ಮೂರು ಕಾರುಗಳನ್ನು ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದ. ಈತ ಕೊಟ್ಟ ಮಾಹಿತಿ ಮೇರೆಗೆ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ