ನ್ಯೂಸ್

ರೈತರ ಆದಾಯ ವೃದ್ಧಿಗೆ ಎಫ್​​ಪಿಒ ಬಲ

ಆರ್​​.ತುಳಸಿಕುಮಾರ್​

ಬೆಂಗಳೂರು: ಕೃಷಿಕರು ಬೆಳೆದ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವಲ್ಲಿ ಸಕ್ರಿಯವಾಗಿರುವ ರೈತ ಉತ್ಪಾದಕ ಸಂಘಗಳು (ಎಫ್​​ಪಿಒ) ಆದಾಯದ ಹಾದಿಯಲ್ಲಿ ಸಾಗಿವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ನುಡಿಯನ್ನು ನಿಜ ಮಾಡುವಲ್ಲಿ ಈ ಎಫ್​​ಪಿಒಒಗಳು ರೈತರನ್ನು ಕೈಹಿಡಿದಿದ್ದು, ವಹಿವಾಟು ಹೆಚ್ಚಿಸಿಕೊಂಡು ಉದ್ದಿಮೆಗಳ ರೂಪ ಪಡೆದುಕೊಳ್ಳುವತ್ತ ಹೆಜ್ಜೆ ಇಟ್ಟಿವೆ.

ರಾಜ್ಯದಲ್ಲಿ 2018ರಲ್ಲಿ ರೈತ ಉತ್ಪಾದಕ ಸಂಸ್ಥೆಗಳ ನೀತಿಯನ್ನು ರೂಪಿಸಿದ ಬಳಿಕ ವಿವಿಧ ಇಲಾಖೆಗಳ ಸಹಯೋಗದಲ್ಲಿ ಎಫ್​​ಪಿಒ ರಚನೆಗೆ ಚಾಲನೆ ದೊರೆತಿದೆ. ಇವರೆಗೆ 1,472 ಎಫ್​​ಪಿಒಗಳು ರಚನೆಗೊಂಡಿದ್ದು, ಅರ್ಧಕ್ಕಿಂತಲೂ ಹೆಚ್ಚಿನವು ಸಕ್ರಿಯವಾಗಿವೆ. ಇವುಗಳ ಸದಸ್ಯರಿಗೆ ತರಬೇತಿ, ಮಾರುಕಟ್ಟೆ ಜ್ಞಾನ, ಮಾರ್ಗದರ್ಶನ ನೀಡುವ ಜತೆಗೆ ಪ್ರೋತ್ಸಾಹಧನ ಕೂಡ ನೀಡಲಾಗುತ್ತಿದೆ. ಹೆಚ್ಚು ವಹಿವಾಟು ನಡೆಸಿ ಇತರ ಸಂಸ್ಥೆಗಳಿಗೆ ಮಾದರಿಯಾಗುವ ಎ್ಪಿಒಗಳಿಗೆ ರೀವಾರ್ಡ್ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ.

ರಫ್ತಿನಿಂದ ಕೋಟಿ ಲೆಕ್ಕದಲ್ಲಿ ವಹಿವಾಟು:

ಬಾಗಲಕೋಟದ ಹುನಗುಂದ ತೋಟಗಾರಿಕೆ ಎಫ್​ಪಿಒ ತಮ್ಮ ಕಂಪನಿ ಮೂಲಕ ವಿದೇಶಕ್ಕೆ ರಫ್ತು ಮಾಡಿ ಕೋಟ್ಯಂತರ ರೂ. ಆದಾಯ ಗಳಿಸುತ್ತಿದೆ. ಕಳೆದ ವರ್ಷ 79 ಕೋಟಿ ರೂ. ವಹಿವಾಟು ನಡೆಸಿ ದಾಖಲೆ ಸೃಷ್ಟಿಸಿದೆ. ‘ಜನ ತೃಪ್ತಿ’ ಹೆಸರಿನಲ್ಲಿ ಮೆಣಸಿನಕಾಯಿ ಉತ್ಪನ್ನವನ್ನು ಅಮೆರಿಕ, ಯುಕೆ ಸಹಿತ ಯೂರೋಪ್‌ನ ಹಲವು ರಾಷ್ಟ್ರಗಳಿಗೆ ರಫ್ತು ಮಾಡಿ 27 ಕೋಟಿ ರೂ. ಗಳಿಸಿದೆ. ರಫ್ತಿಗೆ ಅನುಸರಿಬೇಕಾದ ಜಾಗತಿಕ ಮಟ್ಟದ ಗುಣಮಟ್ಟ, ನಿಯಮಾವಳಿ, ಮಾರ್ಗಸೂಚಿಯಂತೆ ಬೆಳೆ ಬೆಳೆದು ಮಾರಾಟ ಮಾಡುತ್ತಾ ರಾಜ್ಯಕ್ಕೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಅರಿಶಿನವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇದಲ್ಲದೆ ಇನ್ನೂ 20ಕ್ಕೂ ಹೆಚ್ಚು ಉತ್ಪನ್ನಗಳನ್ನು ದೇಶಿಯವಾಗಿಯೇ ಮಾರಾಟ ಮಾಡಲು ಇ-ಮಾರುಕಟ್ಟೆ ಪ್ಲಾಟ್‌ಫಾರ್ಮ್ ಬಿಡುಗಡೆ ಮಾಡಲಾಗಿದೆ ಎಂದು ಹುನಗುಂದ ತೊಟಗಾರಿಕೆ ಎಫ್​ಪಿಒ ಎಂಡಿ ರವಿ ಸಜ್ಜನರ್ ಪ್ರತಿಕ್ರಿಯಿಸಿದ್ದಾರೆ.

ಮಹಿಳೆಯರಿಗೆ ಉದ್ಯೋಗ ಭದ್ರತೆ:

ತುಮಕೂರು ಜಿಲ್ಲೆಯ ಬೆಳ್ಳಾವಿ ರೈತ ಉತ್ಪಾದಕರ ಕಂಪನಿಯಲ್ಲಿ 850 ಸದಸ್ಯರಿದ್ದು, ಈ ಪೈಕಿ 450 ಮಹಿಳಾ ಸದಸ್ಯರಿದ್ದಾರೆ. ವಿವಿಧ ಆಹಾರ ಪದಾರ್ಥಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿರುವ ಈ ಎಫ್​​ಪಿಒ ತೆಂಗಿನ ನಾರಿನ ನೆಲಹಾಸುಗಳ ಮೂಲಕ ವಹಿವಾಟನ್ನು ವೃದ್ಧಿಸಿಕೊಂಡಿದೆ. 65 ಮಹಿಳೆಯರು ತರಬೇತಿ ಪಡೆದು ಮ್ಯಾಟ್ ಸಿದ್ಧಪಡಿಸುವಿಕೆಯಲ್ಲಿ ಸಕ್ರಿಯರಾಗಿದ್ದು, ವರ್ಷ ಪೂರ್ತಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಇದನ್ನು ಕಂಡು ಇನ್ನಿತರ ಮಹಿಳೆಯರು ಕಂಪನಿ ಸೇರಲು ಆಸಕ್ತಿ ತೋರಿಸಿದ್ದಾರೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಸದ್ಯದಲ್ಲೇ ಆನ್‌ಲೈನ್ ಮೂಲಕ ವಹಿವಾಟು ನಡೆಸಲು ಸಿದ್ಧತೆ ನಡೆದಿದೆ. ಇತರ ಉತ್ಪನ್ನಗಳನ್ನು ರಾಜ್ಯದೆಲ್ಲೆಡೆ ಮಾರಾಟ ಮಾಡುವ ಗುರಿ ಇದೆ ಎಂದು ಸಿಇಒ ಕೌಶಲ್ಯ ತಿಳಿಸಿದ್ದಾರೆ.

ಮಹಿಳಾ ಎಫ್​​ಪಿಒ ಕಾರ್ಯಕ್ಕೆ ನೆರವು:

ಬಿಸಿಲ ನಾಡು ಕಲಬುರಗಿ ಜಿಲ್ಲೆಯ ನೀಲೂರಿನ ನಿಂಬೆಕ್ಕ ಮಹಿಳಾ ಎಫ್​​ಪಿಒ ತೊಗರಿ ಬೇಳೆಯನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುತ್ತಾ ಲಾಭ ಗಳಿಸುತ್ತಿದೆ. ಜಿಲ್ಲೆಯ ಆಚೆಗೂ ಶೇಂಗಾ ಸೇರಿ ವಿವಿಧ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ವಹಿವಾಟು ನಡೆಸುತ್ತಿದೆ. ಹಲವು ಮಹಿಳೆಯರಿಗೆ ಉದ್ಯೊಗ ನೀಡಿದ್ದು, ವ್ಯಾಪಾರದ ಬಗ್ಗೆ ಜ್ಞಾನ ಪಸರಿಸುವಲ್ಲಿ ಸಕ್ರಿಯವಾಗಿದೆ. ಗೃಹಿಣಿಯರಾಗಿದ್ದ ನಮಗೆ ಎ್ಪಿಒ ಹೊರಪ್ರಪಂಚ ಹಾಗೂ ವ್ಯಾಪಾರ-ವಹಿವಾಟಿನ ಪಾಠ ಕಲಿಸಿದೆ. ಆದಾಯದ ದಾರಿಯನ್ನೂ ತೋರಿಸಿದೆ ಎಂದು ಈ ಎ್ಪಿನ ಸಿಇಒ ಬಂಗಾರಮ್ಮ ಹಾಗೂ ನಿರ್ದೇಶಕಿ ರೇಣುಕಾ ತಿಳಿಸಿದ್ದಾರೆ.

ಯಲಹಂಕದ ಅಟ್ಟೂರಿನಲ್ಲಿರುವ ತೋಟಗಾರಿಕೆ ವಿವಿಯಲ್ಲಿ ಶುಕ್ರವಾರದಿಂದ ಆರಂಭವಾಗಿರುವ 3 ದಿನಗಳ ರೈತ ಉತ್ಪಾದಕ ಸಂಸ್ಥೆಗಳ ಮೇಳದಲ್ಲಿ 75ಕ್ಕೂ ಹೆಚ್ಚು ಮಳಿಗೆಗಳಲ್ಲಿ ಎಫ್​​ಪಿಒಗಳ ವಿವಿಧ ಉತ್ಪನ್ನಗಳು ಗ್ರಾಹಕರನ್ನು ಸೆಳೆದಿವೆ.

ಕಿಚನ್ ಗಾರ್ಡನ್ ಸೀಡ್ಸ್‌ಗೂ ಬೇಡಿಕೆ:

ಬೆಂಗಳೂರು ನಗರದಲ್ಲಿ ಟೆರೆಸ್ ಗಾರ್ಡ್‌ನ್ ಕ್ರೇಜ್ ಹೆಚ್ಚಿದೆ. ಮನೆಯ ಮಾಳಿಗೆ ಮೇಲೆ ಹಣ್ಣು, ಸೊಪ್ಪು-ತರಕಾರಿ ಬೆಳೆದು ಸ್ವಂತಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಟ್ರೆಂಡ್ ಗಮನಿಸಿ ಚನ್ನಪಟ್ಟಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸೊಪ್ಪು, ತರಕಾರಿ ಬೀಜಗಳನ್ನು ಉತ್ಪಾದಿಸಿ ಮಾರುಕಟ್ಟೆ ವಿಸ್ತಿರಿಸಿಕೊಳ್ಳುತ್ತಿದೆ. ನಾಟಿ ತಳಿಗಳನ್ನೇ ಗುರಿಯಾಗಿಸಿ ಬೀಜ ಉತ್ಪಾದನೆ ಹಾಗೂ ಸಂಗ್ರಹಿಸಿ ಅವುಗಳನ್ನು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. 5-10 ಗ್ರಾಂ ಬೀಜದ ಪೊಟ್ಟಣಕ್ಕೆ 20-30 ರೂ. ದರ ಇದೆ. ಕಿಚನ್ ಗಾರ್ಡನ್ ಹವ್ಯಾಸವುಳ್ಳವರಿಗೆ ಆನ್‌ಲೈನ್ ಮೂಲಕವೂ ಬೀಜಗಳನ್ನು ಪೂರೈಸಲಾಗುತ್ತದೆ.

ರಾಜ್ಯದಲ್ಲಿ ಎಫ್​​ಪಿಒಗಳನ್ನು ರಚಿಸಲು ವಿವಿಧ ಇಲಾಖೆಗಳು ಸಕ್ರಿಯವಾಗಿವೆ. ಇವುಗಳಿಗೆ ನೋಡಲ್ ಏಜೆನ್ಸಿಯಾಗಿ ಜಲಾನಯನ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಒಟ್ಟು 1,472 ಎಫ್​ಪಿಒಗಳು ರಚನೆಯಾಗಿದ್ದು, ಅರ್ಧಕ್ಕಿಂತಲೂ ಹೆಚ್ಚು ಸಕ್ರಿಯವಾಗಿವೆ. ರೈತರು ಒಟ್ಟುಗೂಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಾರುಕಟ್ಟೆ ಜ್ಞಾನ ಪಡೆದು ಅಧಿಕ ಆದಾಯ ಕಂಡುಕೊಳ್ಳಲು ಸಾಧ್ಯವಾಗಿದೆ.

- ಡಾ. ರಾಘವೇಂದ್ರ ಮೇಸ್ತ, ನಿರ್ದೇಶಕ, ಎಫ್​​ಪಿಒಗಳ ಉತ್ಕೃಷ್ಟತಾ ಕೇಂದ್ರ