ಕಲಬುರ್ಗಿ: ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ ವ್ಯಕ್ತಿಯೊಬ್ಬ ಜೈಲಿನಿಂದ ಹೊರಬಂದ ನಂತರ ಡಾಕ್ಟರ್ ಆಗಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಸುಭಾಷ್ ಪಾಟೀಲ್ ಹೆಸರಿನ ವ್ಯಕ್ತಿ 1997ರಲ್ಲಿ ಎಮ್ಬಿಬಿಎಸ್ ಸೇರಿದ್ದನಂತೆ. ಆದರೆ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಕಾರಣ ಅವರನ್ನು 2002ರಲ್ಲಿ ಜೈಲಿಗೆ ಕಳುಹಿಸಲಾಗಿದೆ. ಮೂರು ವರ್ಷಗಳ ಎಮ್ಬಿಬಿಎಸ್ ಕೋರ್ಸ್ ಮುಗಿಸಿದ್ದ ಆತ ಜೈಲಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. 14 ವರ್ಷಗಳ ಸೆರೆಮನೆ ವಾಸದ ನಂತರ 2016ರಲ್ಲಿ ಸುಭಾಷ್ನನ್ನು ಬಂಧನಮುಕ್ತ ಮಾಡಲಾಗಿದೆ.
ಜೈಲಿನಿಂದ ಹೊರಬಂದ ಸುಭಾಷ್ ಮತ್ತೆ ತನ್ನ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. 2019ರಲ್ಲಿ ಎಂಬಿಬಿಎಸ್ ಕೋರ್ಸ್ ಮುಗಿಸಿದ್ದು ಒಂದು ವರ್ಷದ ಕಡ್ಡಾಯ ಇಂಟರ್ನ್ಶಿಪ್ನ್ನು ಮುಗಿಸಿ ಇದೀಗ ಒಬ್ಬ ವೈದ್ಯನಾಗಿ ಹೊರಹೊಮ್ಮಿದ್ದಾನೆ. ಈ ಮೂಲಕ ತನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾನೆ.(ಏಜೆನ್ಸೀಸ್)