ಚಾಮರಾಜನಗರ; ಇಂದು (26) ಹನೂರು ತಾಲೂಕಿನ, ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಇದರ ಸೂಕ್ತ ಕಾರಣ ಕಂಡುಕೊಳ್ಳಲು ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ, ಪಿಸಿಸಿಎಫ್ ನೇತೃತ್ವದ ತಂಡದ ತನಿಖೆಗೆ ಆದೇಶ ನೀಡಿದ್ದಾರೆ.
ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) ಆರಂಭಿಸಿದ ತರುವಾಯ ರಾಜ್ಯದಲ್ಲಿಯೂ ಹುಲಿಗಳ ಸಂರಕ್ಷಣೆಗೆ ಕ್ರಮ ವಹಿಸಲಾಗಿದ್ದು, 563 ಹುಲಿಗಳೊಂದಿಗೆ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಹುಲಿ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ, ಒಂದೇ ದಿನ 4 ಹುಲಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಕಾಡಿನಲ್ಲಿ 4 ಹುಲಿಗಳು ಸಾವಿಗೀಡಾಗಿರುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಇದನ್ನೂ ಓದಿ: ಭಾರತದ ನಿಲುವು ದುರ್ಬಲಗೊಳಿಸುವ ಪ್ರಯತ್ನ; SCO ಸಭೆಯಲ್ಲಿ ಜಂಟಿ ಹೇಳಿಕೆಗೆ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಣೆ;SCO Meet
ಕೂಡಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ, ಸ್ಥಳ ತನಿಖೆ ಕೈಗೊಂಡು, ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿದ್ಯುತ್ ಸ್ಪರ್ಶ, ವಿಷ ಪ್ರಾಷನ ಇತ್ಯಾದಿ ಸಾವಿಗೆ ಅಂಶಗಳು ಕಾರಣವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಮತ್ತು 3 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.